ಕೊಚ್ಚಿ: ಶಬರಿಮಲೆಗೆ ಭೇಟಿ ನೀಡಲು ಅನುಮತಿ ಕೋರಿ 10 ವರ್ಷದ ಬಾಲಕಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಹರಿಶಂಕರ್ ವಿ ಮೆನನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಷಯವು ಸುಪ್ರೀಂ ಕೋರ್ಟ್‍ನ ವಿಸ್ತೃತ ಪೀಠದ ಪರಿಗಣನೆಯಲ್ಲಿದೆ ಎಂದು ಸೂಚಿಸಿದೆ.
ಕರ್ನಾಟಕ ಮೂಲದ ಬಾಲಕಿಗೆ ಋತುಮತಿಯಾಗದ ಕಾರಣ ತನ್ನ ವಯಸ್ಸನ್ನು ಲೆಕ್ಕಿಸದೆ ಶಬರಿಮಲೆಗೆ ತೆರಳಲು ಅವಕಾಶ ನೀಡಬೇಕೆಂದು ಕೋರಿದ್ದಳು. ಕೋವಿಡ್ ಅವಧಿಯಲ್ಲಿ ಶಬಮಾಲೆಗೆ ತೆರಳಲು ಬಯಸಿದ್ದರೂ ತನ್ನ ತಂದೆಯ ಆರೋಗ್ಯ ಸಮಸ್ಯೆ ಮತ್ತು ಆರ್ಥಿಕ ತೊಂದರೆಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ಬಾಲಕಿ ಅರ್ಜಿಯಲ್ಲಿ ತಿಳಿಸಿದ್ದಾಳೆ. ತಿರುವಾಂಕೂರು ದೇವಸ್ವಂ ಮಂಡಳಿಯನ್ನು ಸಂಪರ್ಕಿಸಿದರೂ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಆದರೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ದೇವಸ್ವಂ ನಿಲುವಿನಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.