ರಾಜ್‌ಕೋಟ್: ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ, ಗೇಮ್ ಝೋನ್‌ನ ಸಹ-ಪಾಲುದಾರನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ತಿಂಗಳು ಸಂಭವಿಸಿದ್ದ, ಅಗ್ನಿ ಅವಘಡದಲ್ಲಿ 27 ಮಂದಿ ಮೃತಪಟ್ಟಿದ್ದರು. ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಟಿಆರ್‌ಪಿ ಗೇಮ್ ಝೋನ್‌ನ 6 ಮಂದಿ ಸಹ-ಪಾಲುದಾರರಲ್ಲಿ ಒಬ್ಬರಾದ ಅಶೋಕ್ ಸಿನ್ಹ್ ಜಡೇಜಾ ಅವರು ಗುರುವಾರ ಸಂಜೆ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೇ 25ರಂದು ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿನ ಗೇಮ್ ಝೋನ್‌ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆ ಬಳಿಕ ಜಡೇಜಾ ತಲೆಮರೆಸಿಕೊಂಡಿದ್ದರು. ಸದ್ಯ ಅವರು ಅಪರಾಧ ವಿಭಾಗದ ವಶದಲ್ಲಿದ್ದಾರೆ ಎಂದು ರಾಜ್‌ಕೋಟ್ ಪೊಲೀಸ್ ಕಮಿಷನರ್ ಬ್ರಜೇಶ್ ಕುಮಾರ್ ಝಾ ತಿಳಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಐವರು ಸಹ ಪಾಲುದಾರರನ್ನು ಮತ್ತು ವ್ಯವಸ್ಥಾಪಕರನ್ನು ಬಂಧಿಸಿದ್ದರು.