ನವದೆಹಲಿ: ಪ್ರಧಾನಿ ಮೋದಿ ಅಲೆಯ ಮುಂದೆ ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಮತ್ತು ಕಾಂಗ್ರೆಸ್ ಇನ್ನಷ್ಟು ಹೀನಾಯ ಸ್ಥಿತಿಯನ್ನು ತಲುಪಲಿದೆ ಎಂಬ ಸಾಕಷ್ಟು ಟೀಕೆಗಳ ನಡುವೆ ಮತ್ತೆ ಪುಟಿದೆದ್ದಿದ್ದಿರುವ ಕಾಂಗ್ರೆಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ನೀಡುತ್ತಿದೆ.
2014ರಲ್ಲಿ 44 ಮತ್ತು 2019ರಲ್ಲಿ ಕೇವಲ 52 ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಮಧ್ಯಾಹ್ನ 12.50ರ ಹೊತ್ತಿಗೆ ಕಾಂಗ್ರೆಸ್ 94 ಸ್ಥಾನಗಳಲ್ಲಿ ಮುಂದಿತ್ತು. ಪ್ರಧಾನಿ ಮೋದಿ ನೇತೃತ್ವದ ಆಡಳಿತಾರೂಢ ಎನ್‌ಡಿಎ ಒಕ್ಕೂಟದ ಗೆಲವಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ನೇತೃತ್ವದಲ್ಲಿ ರಚನೆಯಾಗಿರುವ ಇಂಡಿ ಒಕ್ಕೂಟ 231 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಅಲ್ಲದೆ, ಸರ್ಕಾರ ರಚನೆಯ ಆಸೆಯನ್ನು ಸಹ ಜೀವಂತವಾಗಿ ಇರಿಸಿಕೊಂಡಿದೆ. ಇನ್ನು ಎನ್‌ಡಿಎ 294 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
2014ರಲ್ಲಿ ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ನೇತೃತ್ವದಲ್ಲಿ ಮೋದಿ ಅಲೆಯ ಎದುರು ಹೀನಾಯ ಸೋಲಿಗೆ ಕುಸಿಯಿತು. ಬರೋಬ್ಬರಿ 162 ಸ್ಥಾನಗಳನ್ನು ಕಳೆದುಕೊಂಡಿತು ಮತ್ತು ಶೇ 9.3 ರಷ್ಟು ಮತ ಹಂಚಿಕೆಯು ಕುಸಿಯಿತು. ಹಿಂದಿ ಮಾತನಾಡುವ ರಾಜ್ಯಗಳಾದ ಗುಜರಾತ್, ರಾಜಸ್ಥಾನ, ಬಿಹಾರ್, ಜಾರ್ಖಂಡ್ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಗೆ ಭಾರಿ ಮುಖಭಂಗವಾಯಿತು. 543 ಲೋಕಸಭಾ ಸ್ಥಾನಗಳಲ್ಲಿ 336 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಎನ್‌ಡಿಎ ಅಧಿಕಾರಕ್ಕೆ ಬಂದಿತು. ಇದರಲ್ಲಿ ಬಿಜೆಪಿಯೇ 282 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಹುಮತ ಸಾಧಿಸಿತ್ತು. ಎನ್‌ಡಿಎ ಉತ್ತರ ಪ್ರದೇಶದಲ್ಲಿ 73, ಮಹಾರಾಷ್ಟ್ರದಲ್ಲಿ 41, ಬಿಹಾರದಲ್ಲಿ 31, ಮಧ್ಯಪ್ರದೇಶದಲ್ಲಿ 27, ಗುಜರಾತ್‌ನಲ್ಲಿ 26, ರಾಜಸ್ಥಾನದ 25, ದೆಹಲಿಯ 7, ಹಿಮಾಚಲ ಪ್ರದೇಶದ ನಾಲ್ಕು ಮತ್ತು ಉತ್ತರಾಖಂಡದಲ್ಲಿ ಐದು ಸ್ಥಾನಗಳನ್ನು ಗೆದ್ದಿತ್ತು. ಜಾರ್ಖಂಡ್‌ನ 14 ರಲ್ಲಿ 12, ಛತ್ತೀಸ್‌ಗಢದ 11 ರಲ್ಲಿ 10 ಮತ್ತು ಹರಿಯಾಣದ 10 ರಲ್ಲಿ 7 ಸ್ಥಾನಗಳನ್ನು ಗೆದ್ದಿತ್ತು.
ಆದರೆ, ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್, ಉತ್ತರ ಪ್ರದೇಶದಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿತ್ತು. ಪಕ್ಷದ ಭದ್ರಕೋಟೆಗಳಾದ ಅಮೇಥಿ ಮತ್ತು ರಾಯ್ಬರೇಲಿಯನ್ನು ಉಳಿಸಿಕೊಂಡಿತ್ತು. ಆದರೆ, ಉಳಿದ ರಾಜ್ಯಗಳಿಂದ ಕೇವಲ ಆರು ಸ್ಥಾನಗಳನ್ನು ಮಾತ್ರ ಗೆದ್ದಿತ್ತು.
2019ರಲ್ಲಿ ಏನಾಗಿತ್ತು?
ಕಳೆದ ವರ್ಷದ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಸ್ಪಷ್ಟಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನು ಏರಿತು. ಎನ್‌ಡಿಎ ಒಕ್ಕೂಟ 353 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಇದರಲ್ಲಿ ಬಿಜೆಪಿ ಏಕಾಂಗಿಯಾಗಿ 303 ಕ್ಷೇತ್ರಗಳಲ್ಲಿ ಗೆದ್ದು, ಸ್ವತಂತ್ರವಾಗಿ ಸರ್ಕಾರವನ್ನು ರಚನೆ ಮಾಡಿತು. ಉತ್ತರ ಪ್ರದೇಶದಲ್ಲಿ 74, ಬಿಹಾರದಲ್ಲಿ 39 ಮತ್ತು ಮಧ್ಯಪ್ರದೇಶದಲ್ಲಿ 28 ಸ್ಥಾನಗಳನ್ನು ಗಳಿಸುವುದರೊಂದಿಗೆ ಮತ್ತೊಮ್ಮೆ ಹಿಂದಿ ಬೆಲ್ಟ್‌ನಲ್ಲಿ ಬಿಜೆಪಿ ಕಮಾಲ್ ಮಾಡಿತು. ಅಲ್ಲದೆ, ಕಾಂಗ್ರೆಸ್ ಭರವಸೆಯು ಸಹ ಹುಸಿಯಾಯಿತು. ಗುಜರಾತ್, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ದೆಹಲಿ ಸೇರಿ ಬಿಜೆಪಿ 77 ಸ್ಥಾನಗಳನ್ನು ಗೆದ್ದಿತ್ತು. ಛತ್ತೀಸ್‌ಗಢದ ಒಂಬತ್ತು ಮತ್ತು ಜಾರ್ಖಂಡ್‌ನ 11 ಸೇರಿದರೆ ಹಿಂದಿ ಬೆಲ್ಟ್‌ನಲ್ಲಿ ಬಿಜೆಪಿ 238 ಸ್ಥಾನಗಳನ್ನು ಗಳಿಸಿತು.
2019ರಲ್ಲೂ ಕಾಂಗ್ರೆಸ್, ರಾಹುಲ್ ಗಾಂಧಿ ನೇತೃತ್ವದಲ್ಲಿ ಸ್ಪರ್ಧಿಸಿ, ಮತ್ತೊಮ್ಮೆ ಕೆಟ್ಟದಾಗಿ ಕುಸಿಯಿತು. ಕೇವಲ ಆರು ಸ್ಥಾನಗಳನ್ನು ಸ್ವಂತವಾಗಿ ಮತ್ತು ಏಳು ಸ್ಥಾನಗಳನ್ನು ಜಾರ್ಖಂಡ್ ಮುಕ್ತಿ ಮೋರ್ಚಾದೊಂದಿಗೆ ಸೇರಿ ಗಳಿಸಿತು. ಆದರೆ, ಗಮನಾರ್ಹ ಸಂಗತಿ ಏನೆಂದರೆ, ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ರಾಹುಲ್ ಗಾಂಧಿ ಆಘಾತಕಾರಿ ಸೋಲನ್ನು ಅನುಭವಿಸಿದರು. ಕಾಂಗ್ರೆಸ್ ನಾಯಕ ಸತತ ನಾಲ್ಕನೇ ಗೆಲುವು ಸಾಧಿಸಲು ಬಯಸಿದ್ದರು. ಆದರೆ, ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಕೆಟ್ಟದಾಗಿ ಸೋತರು.
ಈ ಸೋಲಿನ ನಂತರ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಗಾಂಧಿ ಕುಟುಂಬದ ನಿಷ್ಠಾವಂತರಿಂದ ಆಕ್ಷೇಪಣೆಗಳ ಹೊರತಾಗಿಯೂ ರಾಹುಲ್ ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸದೇ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದರು.