ನವದೆಹಲಿ: ಜಾಗತಿಕ ಲಿಂಗತ್ವ ಸಮಾನತೆಗೆ ಸಂಬಂಧಿಸಿದ ಸೂಚ್ಯಂಕದಲ್ಲಿ ಭಾರತವು ಎರಡು ಸ್ಥಾನ ಕುಸಿತ ಕಂಡಿದ್ದು, 129ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಅದು 127ನೇ ಸ್ಥಾನದಲ್ಲಿತ್ತು. ಐಸ್‌ಲ್ಯಾಂಡ್ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.
ನವದೆಹಲಿ: ಜಾಗತಿಕ ಲಿಂಗತ್ವ ಸಮಾನತೆಗೆ ಸಂಬಂಧಿಸಿದ ಸೂಚ್ಯಂಕದಲ್ಲಿ ಭಾರತವು ಎರಡು ಸ್ಥಾನ ಕುಸಿತ ಕಂಡಿದ್ದು, 129ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಅದು 127ನೇ ಸ್ಥಾನದಲ್ಲಿತ್ತು. ಐಸ್‌ಲ್ಯಾಂಡ್ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.
ವಿಶ್ವ ಆರ್ಥಿಕ ವೇದಿಕೆಯು (ಡಬ್ಲ್ಯುಇಎಫ್) ಬುಧವಾರ ಬಿಡುಗಡೆ ಮಾಡಿರುವ ಲಿಂಗತ್ವ ಅಂತರ ಸೂಚ್ಯಂಕ ವರದಿಯಲ್ಲಿ, ಫಿನ್‌ಲ್ಯಾಂಡ್ ಎರಡನೇ ಸ್ಥಾನದಲ್ಲಿದ್ದರೆ, ನಾರ್ವೆ, ನ್ಯೂಜಿಲೆಂಡ್ ಮತ್ತು ಸ್ವೀಡನ್ ಕ್ರಮವಾಗಿ ಮೂರರಿಂದ ಐದನೇ ಸ್ಥಾನದಲ್ಲಿವೆ. ಬ್ರಿಟನ್ 14ನೇ ಸ್ಥಾನ ಮತ್ತು ಅಮೆರಿಕ 43ನೇ ಸ್ಥಾನ ಪಡೆದಿದೆ.
ದಕ್ಷಿಣ ಏಷ್ಯಾದಲ್ಲಿ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್ ಮತ್ತು ಭಾರತ ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದಿದ್ದರೆ, ಪಾಕಿಸ್ತಾನ ಕೊನೆಯ ಸ್ಥಾನದಲ್ಲಿದೆ.
ಶಿಕ್ಷಣ, ರಾಜಕೀಯ ಸಬಲೀಕರಣಕ್ಕೆ ಸಂಬಂಧಿಸಿದಂತೆ ಲಿಂಗತ್ವ ಸಮಾನತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಭಾರತವು ಕಳೆದ ಸಾಲಿಗಿಂತ ಎರಡು ಸ್ಥಾನಗಳಷ್ಟು ಕುಸಿತ ಕಂಡಿದೆ. ಆದರೆ ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶಗಳಿಗೆ ಸಂಬಂಧಿಸಿದ ಅಂಕಗಳಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ವರದಿ ಉಲ್ಲೇಖಿಸಿದೆ.
ವರದಿಯ ಪ್ರಮುಖಾಂಶಗಳು
* ಮಾಧ್ಯಮಿಕ ಶಿಕ್ಷಣ ದಾಖಲಾತಿಗೆ ಸಂಬಂಧಿಸಿದಂತೆ ಭಾರತವು ಅತ್ಯುತ್ತಮ ಲಿಂಗ ಸಮಾನತೆ ಹೊಂದಿದೆ. ಮಹಿಳಾ ರಾಜಕೀಯ ಸಬಲೀಕರಣದಲ್ಲೂ ಭಾರತ ಉತ್ತಮ ಅಂಕಗಳನ್ನು ಗಳಿಸಿದ್ದು, ಜಾಗತಿಕವಾಗಿ 65ನೇ ಸ್ಥಾನ ಪಡೆದಿದೆ
* 140 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಲಿಂಗತ್ವ ಅಸಮಾನತೆಯನ್ನು ಅಳಿಸಿ ಹಾಕುವಲ್ಲಿ ಒಟ್ಟಾರೆ ಶೇ 64.1ರಷ್ಟು ಪ್ರಗತಿ ಸಾಧಿಸಿದೆ
* ಜಾಗತಿಕವಾಗಿ ಲಿಂಗತ್ವ ಅಂತರವು ಶೇ 68.5ರಷ್ಟು ಇದ್ದು, ಇದೇ ವೇಗದಲ್ಲಿ ಸಾಗಿದರೆ ಪೂರ್ಣ ಪ್ರಮಾಣದಲ್ಲಿ ಲಿಂಗತ್ವ ಸಮಾನತೆ ಸಾಧಿಸಲು ಇನ್ನೂ 134 ವರ್ಷಗಳು ಬೇಕಾಗುತ್ತವೆ
* ಸೂಚ್ಯಂಕದಲ್ಲಿ ಸುಡಾನ್ ಕೊನೆಯ ಅಂದರೆ 146ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 145ನೇ ಸ್ಥಾನದಲ್ಲಿದೆ. ಪಾಕಿಸ್ತಾನವು ಕಳೆದ ಸಾಲಿಗಿಂತ ಮೂರು ಸ್ಥಾನ ಕುಸಿತ ಕಂಡಿದೆ.