ಜಿನಿವಾ: ಯುದ್ಧ, ಹಿಂಸಾಚಾರ ಮತ್ತು ಕಿರುಕುಳ ಇತ್ಯಾದಿಯಿಂದಾಗಿ ಜಾಗತಿಕವಾಗಿ 12 ಕೋಟಿ ಜನರು ಬಲವಂತವಾಗಿ ಸ್ಥಳಾಂತರವಾಗಿದ್ದಾರೆ ಎಂದು ವಿಶ್ವಸಂಸ್ಥೆಯು ಗುರುವಾರ ಹೇಳಿದೆ.
ಜಿನಿವಾ: ಯುದ್ಧ, ಹಿಂಸಾಚಾರ ಮತ್ತು ಕಿರುಕುಳ ಇತ್ಯಾದಿಯಿಂದಾಗಿ ಜಾಗತಿಕವಾಗಿ 12 ಕೋಟಿ ಜನರು ಬಲವಂತವಾಗಿ ಸ್ಥಳಾಂತರವಾಗಿದ್ದಾರೆ ಎಂದು ವಿಶ್ವಸಂಸ್ಥೆಯು ಗುರುವಾರ ಹೇಳಿದೆ.
ಗಾಜಾ, ಸುಡಾನ್, ಮ್ಯಾನ್ಮಾರ್‌ನಲ್ಲಿ ನಡೆದಿರುವ ಸಂಘರ್ಷದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಘಟಕ ಯುಎನ್‌ಎಚ್‌ಸಿಆರ್ ತಿಳಿಸಿದೆ.
ಜಾಗತಿಕವಾಗಿ ಸ್ಥಳಾಂತರಗೊಂಡವರ ಜನಸಂಖ್ಯೆಯು ಜಪಾನ್‌ನ ಜನಸಂಖ್ಯೆಗೆ ಸಮಾನವಾಗಿದೆ ಎಂದು ಅದು ಹೇಳಿದೆ.
'ಸಂಘರ್ಷವು ಸಾಮೂಹಿಕ ಸ್ಥಳಾಂತರಕ್ಕೆ ಮುಖ್ಯ ಕಾರಣವಾಗಿದೆ' ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಘಟಕದ ಮುಖ್ಯಸ್ಥರಾದ ಫಿಲಿಪ್ಪೊ ಗ್ರಾಂಡಿ ತಿಳಿಸಿದ್ದಾರೆ.
ಕಳೆದ ವರ್ಷದ ಅಂತ್ಯದವರೆಗೆ ಸ್ಥಳಾಂತರಗೊಂಡವರ ಒಟ್ಟು ಸಂಖ್ಯೆ 11.73 ಕೋಟಿ ಎಂದು ಯುಎನ್‌ಎಚ್‌ಸಿಆರ್ ವರದಿಯಲ್ಲಿ ತಿಳಿಸಿದೆ.
ಈ ವರ್ಷದ ಏಪ್ರಿಲ್ ಅಂತ್ಯದ ವೇಳೆಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಜಗತ್ತಿನಾದ್ಯಂತ ಅಂದಾಜು 12 ಕೋಟಿ ಜನರು ಸ್ಥಳಾಂತರವಾಗಿದ್ದಾರೆ. 12 ವರ್ಷಗಳಿಂದ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂತರರಾಷ್ಟ್ರೀಯ ಬಿಕ್ಕಟ್ಟುಗಳು ಹಾಗೂ ಆಯಾ ದೇಶದೊಳಗಿನ ಆಂತರಿಕ ಸಂಘರ್ಷಗಳನ್ನು ತ್ವರಿತವಾಗಿ ಬಗೆಹರಿಸಲು ವಿಫಲವಾಗಿರುವ ಕಾರಣ 2012ರಿಂದ ವಲಸೆ ಹೋದವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ.