ಉದ್ರಪ್ರಯಾಗ: ಉತ್ತರಾಖಂಡದ ರಿಷಿಕೇಶ-ಬದರಿನಾಥ ಹೆದ್ದಾರಿಯಲ್ಲಿ ಟೆಂಪೊ ಟ್ರಾವೆಲರ್ ಕಮರಿಗೆ ಬಿದ್ದ ಪರಿಣಾಮ 12 ಮಂದಿ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಸ್‌ಡಿಆರ್‌ಎಫ್ ಅಧಿಕಾರಿ ಮಣಿಕಾಂತ್ ಮಿಶ್ರಾ ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, 'ರುದ್ರಪ್ರಯಾಗ ಜಿಲ್ಲೆಯಲ್ಲಿ ಸಂಭವಿಸಿದ ಟೆಂಪೊ ಟ್ರಾವೆಲರ್ ಅಪಘಾತದ ಸುದ್ದಿ ತಿಳಿದು ಮನಸ್ಸಿಗೆ ದುಃಖವಾಗಿದೆ. ಸ್ಥಳೀಯಾಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ' ಎಂದು ತಿಳಿಸಿದ್ದಾರೆ.
ಮೃತರ ಕುಟುಂಬಸ್ಥರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ. ಹಾಗೆಯೇ ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಧಾಮಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.