ನವದೆಹಲಿ: ಅಸ್ಸಾಂ, ಮಣಿಪುರ ಸೇರಿದಂತೆ ಎಂಟು ಈಶಾನ್ಯ ರಾಜ್ಯಗಳ ಒಟ್ಟು 25 ಲೋಕಸಭಾ ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದ್ದರೆ, ಕಾಂಗ್ರೆಸ್ 7 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಉಳಿದ ಐದು ಕ್ಷೇತ್ರಗಳು ಸ್ಥಳೀಯ ಪಕ್ಷಗಳ ಪಾಲಾಗಿವೆ.
ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಅತಿ ಹೆಚ್ಚು ಅಂದರೆ 14 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ 9ರಲ್ಲಿ ಬಿಜೆಪಿ, 3ರಲ್ಲಿ ಕಾಂಗ್ರೆಸ್ ಗೆದ್ದಿವೆ. ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಮತ್ತು ಅಸ್ಸಾಂ ಗಣ ಪರಿಷತ್ (ಎಜೆಪಿ) ತಲಾ ಒಬ್ಬರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಿಜೆಪಿ ಆಡಳಿತ ಇರುವ ಅಸ್ಸಾಂನಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದುವ ಗುರಿಯನ್ನು ಅಲ್ಲಿನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಹೊಂದಿದ್ದರು.
ಮಣಿಪುರದ ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ:
ಜನಾಂಗೀಯ ಸಂಘರ್ಷ ಪೀಡಿತ ಮಣಿಪುರ ರಾಜ್ಯದ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಇಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದರೂ, ಮತದಾರರು ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ.
ವರ್ಷದ ಹಿಂದಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಯಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಅಲ್ಲದೆ ಸಹಸ್ರಾರು ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರೀತ ಶಿಬಿರಗಳಲ್ಲಿ ವಾಸವಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಣಿಪುರ ರಾಜ್ಯದಲ್ಲಿ ಯಾವುದೇ ರೀತಿಯ ಅಬ್ಬರದ ಪ್ರಚಾರ ನಡೆದಿರಲಿಲ್ಲ. ಇದರ ನಡುವೆಯೂ ಇಲ್ಲಿ ಉತ್ತಮ ಮತದಾನ ಆಗಿತ್ತು. 2019ರಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಅದನ್ನೂ ಕಳೆದುಕೊಂಡಿದೆ.
ಅರುಣಾಚಲ ವಿಧಾನಸಭಾ ಚುನಾವಣೆಯಲ್ಲಿ 'ಹ್ಯಾಟ್ರಿಕ್' ಗೆಲುವು ಸಾಧಿಸಿರುವ ಬಿಜೆಪಿ, ರಾಜ್ಯದ ಎರಡು ಲೋಕಸಭಾ ಕ್ಷೇತ್ರಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಲೋಕಸಭಾ ಚುನಾವಣೆಯ ಜತೆಗೇ ನಡೆದ ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ 60 ಕ್ಷೇತ್ರಗಳ ಪೈಕಿ 46ರಲ್ಲಿ ಜಯಿಸಿರುವ ಬಿಜೆಪಿ ಸತತ ಮೂರನೇ ಬಾರಿ ಅಧಿಕಾರ ರಚಿಸಲು ಸಜ್ಜಾಗಿದೆ.
ಕೇಂದ್ರ ಸಚಿವ ರಿಜಿಜುಗೆ ಜಯ:
ಅರುಣಾಚಲ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಕಿರಣ್ ರಿಜಿಜು ಅವರು ತನ್ನ ಸಮೀಪದ ಅಭ್ಯರ್ಥಿ ಕಾಂಗ್ರೆಸ್‌ನ ನಬಮ್ ತುಕಿ ಅವರ ಎದುರು ಭಾರಿ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
ಮೇಘಾಲಯದಲ್ಲಿನ ಎರಡು ಕ್ಷೇತ್ರಗಳ ಪೈಕಿ 'ವಾಯ್ಸ್ ಆಫ್ ದಿ ಪೀಪಲ್ಸ್ ಪಾರ್ಟಿ' (ವಿಒಟಿಪಿಪಿ) ಮತ್ತು ಕಾಂಗ್ರೆಸ್ ಪಕ್ಷಗಳು ತಲಾ ಒಂದರಲ್ಲಿ ಜಯಗಳಿಸಿವೆ. ಮಿಜೋರಾಂ ಆಡಳಿತ ಪಕ್ಷವಾದ ಜೋರಾಂ ಪೀಪಲ್ಸ್ ಮೂವ್‌ಮೆಂಟ್ (ಜಡ್‌ಪಿಎಂ) ರಾಜ್ಯದ ಏಕೈಕ ಕ್ಷೇತ್ರದಲ್ಲಿ ವಿಜಯ ಸಾಧಿಸಿದೆ. ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಅಧಿಕಾರದಲ್ಲಿರುವ ನಾಗಾಲ್ಯಾಂಡ್ ರಾಜ್ಯದ ಏಕೈಕ ಕ್ಷೇತ್ರವನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ.
ತ್ರಿಪುರದಲ್ಲಿನ ಆಡಳಿತ ಪಕ್ಷ ಬಿಜೆಪಿಯು ರಾಜ್ಯದ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಸಿಕ್ಕಿಂನಲ್ಲಿ ಅಧಿಕಾರದಲ್ಲಿ ಇರುವ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ರಾಜ್ಯದಲ್ಲಿನ ಏಕೈಕ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ.