ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಕುರಿತ 'ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರ‍್ಯಾಂಕಿಂಗ್-2025' ಪಟ್ಟಿ ಬುಧವಾರ ಪ್ರಕಟವಾಗಿದ್ದು, ವಿಶ್ವದ ಅಗ್ರ 150 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬಾಂಬೆ ಹಾಗೂ ದೆಹಲಿಯಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಸ್ಥಾನ ಪಡೆದಿವೆ.
ಜಾಗತಿಕ ರ್‍ಯಾಂಕಿಂಗ್ ಪಟ್ಟಿಯಲ್ಲಿ ಸತತ 13ನೇ ಬಾರಿಯೂ ಅಮೆರಿಕದ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮೊದಲ ಸ್ಥಾನ ಉಳಿಸಿಕೊಂಡಿದೆ.
ಕಳೆದ ವರ್ಷ 149ನೇ ಸ್ಥಾನದಲ್ಲಿದ್ದ ಐಐಟಿ ಬಾಂಬೆ, ಈ ವರ್ಷ 118ನೇ ರ್‍ಯಾಂಕ್‌ಗೆ ಏರಿದೆ. ಐಐಟಿ ದೆಹಲಿ ಈ ಬಾರಿ 150ನೇ ಸ್ಥಾನ ಪಡೆದುಕೊಂಡಿದ್ದು, ಕಳೆದ ಬಾರಿಗಿಂತ 47 ಸ್ಥಾನ ಮೇಲಕ್ಕೇರಿದೆ.
ಉನ್ನತ ಶಿಕ್ಷಣ ವ್ಯವಸ್ಥೆಯ ವಿಶ್ಲೇಷಣೆ ನಡೆಸಿ, ರ‍್ಯಾಂಕಿಂಗ್ ನೀಡುವ ಲಂಡನ್ ಮೂಲದ ಕ್ವಾಕ್ವರೇಲಿ ಸೈಮಂಡ್ಸ್ (ಕ್ಯೂಎಸ್) ಸಂಸ್ಥೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದು ಪ್ರಕಟಿಸಿರುವ ಶ್ರೇಯಾಂಕದ ಪ್ರಕಾರ, 'ಉದ್ಯೋಗ ಪಡೆಯಲು ಕೌಶಲ ವರ್ಧನೆ' ವಿಭಾಗದಲ್ಲಿ ದೆಹಲಿ ವಿಶ್ವವಿದ್ಯಾಲಯ ಜಾಗತಿಕ ಮಟ್ಟದಲ್ಲಿ 44ನೇ ಸ್ಥಾನ ಪಡೆದುಕೊಂಡಿದೆ.
ಕಳೆದ ಬಾರಿ 225ನೇ ರ್‍ಯಾಂಕ್ ಪಡೆದಿದ್ದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಈ ಬಾರಿ 211ನೇ ರ್‍ಯಾಂಕ್ ಪಡೆದುಕೊಂಡಿದ್ದು, ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದೆ. ಐಐಟಿ ಖರಗಪುರ 222ನೇ (ಕಳೆದ ಬಾರಿ 271) ರ್‍ಯಾಂಕ್, ಐಐಟಿ ಮದ್ರಾಸ್ 227 (271) ಹಾಗೂ ಐಐಟಿ ಕಾನ್ಪುರ 263ನೇ (278) ರ್‍ಯಾಂಕ್ ಪಡೆದು ಜಾಗತಿಕ ಮಟ್ಟದಲ್ಲಿ ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡಿವೆ.
ದೆಹಲಿ ವಿಶ್ವವಿದ್ಯಾಲಯ 328ನೇ ರ್‍ಯಾಂಕ್ ಮತ್ತು ಅಣ್ಣಾ ವಿಶ್ವವಿದ್ಯಾಲಯ 383ನೇ ರ್‍ಯಾಂಕ್ ಪಡೆದಿದ್ದು, ವಿಶ್ವದ ಅಗ್ರ 400 ರ್‍ಯಾಂಕ್‌ಗಳನ್ನು ಪಡೆದಿರುವ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
'ಕ್ಯೂಎಸ್' ರ‍್ಯಾಂಕಿಂಗ್ ವರದಿಯ ಪ್ರಮುಖ ಅಂಶಗಳು:
ಭಾರತದ ಶಿಕ್ಷಣ ಸಂಸ್ಥೆಗಳು 'ಉದ್ಯೋಗ ಪಡೆಯಲು ಕೌಶಲ ವರ್ಧನೆ' ವಿಷಯದಲ್ಲಿ ಗಳಿಸಿರುವ ಸ್ಕೋರ್ 10ಕ್ಕಿಂತ ಕಡಿಮೆ ಇದೆ. ಜಾಗತಿಕವಾಗಿ ಭಾರತದ ಶಿಕ್ಷಣ ಸಂಸ್ಥೆಗಳ ಸರಾಸರಿ ಅಂಕ 23.8. ಕೌಶಲವನ್ನು ಉತ್ತಮಪಡಿಸುವ ಮೂಲಕ ಹೊಸ ಪದವೀಧರರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕಿದೆ
ಸುಸ್ಥಿರತೆ ವಿಷಯದಲ್ಲಿಯೂ ಭಾರತದ ಶಿಕ್ಷಣ ಸಂಸ್ಥೆಗಳ ಸ್ಕೋರ್ 10ಕ್ಕಿಂತ ಕೆಳಗಿದೆ. ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸುಸ್ಥಿರತೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ, ಅದನ್ನು ಬಲಪಡಿಸುವ ಅಗತ್ಯವಿದೆ
ಭಾರತದ ಶಿಕ್ಷಣ ಸಂಸ್ಥೆಗಳು ಗಣನೀಯ ಸಾಧನೆಗಳನ್ನು ಮಾಡಿವೆ. ಅದರ ಜತೆಗೆ ಅವು ಜಾಗತಿಕ ಮಟ್ಟದಲ್ಲಿ ಹಲವು ಸವಾಲುಗಳನ್ನೂ ಎದುರಿಸುತ್ತಿವೆ
ಅಂತರರಾಷ್ಟ್ರೀಯ ಅಧ್ಯಾಪಕರ ಅನುಪಾತ ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಅನುಪಾತ ಭಾರತದಲ್ಲಿ ಕಡಿಮೆ ಇದೆ. ಹೆಚ್ಚಿನ ಅಂತರರಾಷ್ಟ್ರೀಯ ಸಹಯೋಗ ಮತ್ತು ವಿನಿಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅನುಪಾತವನ್ನು ಹೆಚ್ಚಿಸಿಕೊಳ್ಳಬೇಕಿದೆ
ಹಾಗೆಯೇ ಭಾರತದಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಅನುಪಾತವೂ ಜಾಗತಿಕ ಸರಾಸರಿಗಿಂತ ಕಡಿಮೆಯಿದೆ. ಅಧ್ಯಾಪಕರ ನೇಮಕಾತಿಗೆ ಒತ್ತು ನೀಡಬೇಕಾದ ಅಗತ್ಯವಿದೆ.