ಗಡ್ಚಿರೋಲಿ : 170ಕ್ಕೂ ಪ್ರಕರಣಗಳಲ್ಲಿ ಬೇಕಾಗಿದ್ದ ನಕ್ಸಲ್ ದಂಪತಿ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.
ಗಿರಿಧರ್ ಅಲಿಯಾಸ್ ನಂಗ್ಸು ತುಮ್ರೆಟಿ ತನ್ನ ಪತ್ನಿಯೊಂದಿಗೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಸಮ್ಮುಖದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಿರಿಧರ್ ವಿರುದ್ಧ 170ಕ್ಕೂ ಹೆಚ್ಚು ಪ್ರಕರಣಗಳಿದ್ದವು. ಆತನ ತಲೆಗೆ ₹25 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಆತನ ಪತ್ನಿ ವಿರುದ್ಧ 17 ಪ್ರಕರಣಗಳಿದ್ದು, ಆಕೆ ತಲೆಗೆ ₹16 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಗಿರಿಧರ್ 1996ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ದ ಎಡಪಲ್ಲಿ ದಳಕ್ಕೆ ಸೇರಿದ್ದ. ಗಡ್ಚಿರೋಲಿಯಲ್ಲಿ ಅದರ ಚಟುವಟಿಕೆಗಳ ಮುಖ್ಯಸ್ಥನಾಗಿದ್ದ. ಈತನ ವಿರುದ್ಧ 86 ಎನ್‌ಕೌಂಟರ್, 15 ಬೆಂಕಿ ಹಚ್ಚಿದ ಪ್ರಕರಣ ಸೇರಿದಂತೆ 179 ಪ್ರಕರಣಗಳಿವೆ. ಆತನ ಪತ್ನಿ ಲಲಿತಾ ವಿರುದ್ಧ 17 ಪ್ರಕರಣಗಳಿವೆ.
ಈಗ ಇಬ್ಬರೂ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಗಿರಿಧರ್‌ಗೆ ₹15 ಲಕ್ಷ ಮತ್ತು ಲಲಿತಾಗೆ ₹8.50 ಲಕ್ಷ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ' ಗಿರಿಧರ್ ಶರಣಾಗತಿಯಿಂದ ಗಡ್ಚಿರೋಲಿಯಲ್ಲಿ ಮಾವೋವಾದಿ ಚಳವಳಿಯ ಬೆನ್ನೆಲುಬು ಮುರಿದಿದೆ. ನಕ್ಸಲ್ ಹಾವಳಿಯನ್ನು ಕೊನೆಗೊಳಿಸಲು ಮತ್ತು ಉಗ್ರರನ್ನು ಮತ್ತೆ ಮುಖ್ಯವಾಹಿನಿಗೆ ತರಲು ಗಡ್ಚಿರೋಲಿ ಪೊಲೀಸರು ಅವಿರತ ಪ್ರಯತ್ನಗಳನ್ನು ಮಾಡಿದ್ದಾರೆ' ಎಂದು ಅವರು ಶ್ಲಾಘಿಸಿದ್ದಾರೆ.