ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಬಳಿ 17 ವರ್ಷಗಳ ಬಳಿಕ ಮತ್ತೆ ದ್ರವರೂಪದ ಸ್ಪೋಟಕಗಳು ಪತ್ತೆಯಾಗಿವೆ. ಪತ್ತೆಹಚ್ಚಲು ಕಷ್ಟಕರವಾದ (ಡಿಫಿಕಲ್ಟ್ ಟು ಡಿಕೆಕ್ಟ್ ಡಿ2ಡಿ) ಇಂತಹ ಸ್ಪೋಟಕಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಪೊಲೀಸರು ಇತ್ತೀಚೆಗೆ ನಡೆಸಿದ ದಾಳಿಯ ವೇಳೆ ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಪುಲ್ವಾಮಾದಲ್ಲಿ ನಡೆದ ಗುಂಡಿನ ಚಕಮಕಿಯ ನಂತರ ಬಂಧಿಸಲಾದ ಉಗ್ರನಿಂದ ದ್ರವ ರೂಪದ ಸ್ಫೋಟಕ ವಶಪಡಿಸಿಕೊಳ್ಳಲಾಯಿತು. ಲಷ್ಕರ್-ಎ- ತಯಬಾ (ಎಲ್‌ಇಟಿ) ಭಯೋತ್ಪಾದಕರಲ್ಲಿ ಒಬ್ಬನಾದ ರಿಯಾಜ್ ದಾರ್ ಅಲಿಯಾಸ್ ಸತಾರ್‌ನನ್ನು ಬಂಧಿಸಿದ್ದು, ಈತನ ಸಹಚರ ರಯೀಸ್ ದಾರ್ ಗುಂಡಿನ ಚಕಮಕಿ ವೇಳೆ ಹತನಾಗಿದ್ದಾನೆ.
ಇಬ್ಬರು ಲಷ್ಕರ್-ಎ-ತಯಬಾ ಭಯೋತ್ಪಾದಕರು ದ್ರವ ರೂಪದ ಐಇಡಿಗಳನ್ನು ಸಿದ್ಧಪಡಿಸಿದ್ದು, ಅವುಗಳನ್ನು ತೋಟಗಳಲ್ಲಿ ಬಚ್ಚಿಟ್ಟಿದ್ದರು ಎನ್ನುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿತ್ತು. ಸೇನೆಯ ಸ್ಫೋಟಕ ತಜ್ಞರು ಸುಮಾರು 6 ಕೆಜಿ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿ ನಾಶಪಡಿಸಿದ್ದಾರೆ. ಇಂತಹ ಸ್ಫೋಟಕಗಳನ್ನು ಹುದುಗಿರಿಸಿದರೆ ಅವುಗಳನ್ನು ಬಾಂಬ್ ಶೋಧಕಗಳು ಅಥವಾ ಶ್ವಾನಗಳಿಂದಲೂ ಪತ್ತೆಮಾಡಲಾಗದು ಎನ್ನುತ್ತಾರೆ ಅಧಿಕಾರಿಗಳು.
2007ರಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ಗುಂಪುಗಳು ದ್ರವ ಸ್ಫೋಟಕಗಳನ್ನು ಬಳಸಿದ್ದವು. ಆದರೆ ನಂತರದ ಒಂದೂವರೆ ದಶಕದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಬಳಿ ದ್ರವ ಸ್ಫೋಟಕ ಕಂಡುಬಂದಿರಲಿಲ್ಲ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಈಗ ದ್ರವರೂಪದ ಸ್ಫೋಟಕಗಳನ್ನು ಬಳಸುತ್ತಿರುವುದು ಗುಪ್ತಚರ ಮಾಹಿತಿಗಳಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2022ರ ಫೆಬ್ರವರಿಯಲ್ಲಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಮ್ಮುವಿನ ಅಂತರರಾಷ್ಟ್ರೀಯ ಗಡಿಯಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಾಗ, ಇದರಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಗಾಳಿಯಲ್ಲಿ ಬೀಳಿಸಿದ್ದ ಬಿಳಿ ದ್ರವದ ಮೂರು ಬಾಟಲಿಗಳು ಇದ್ದವು.