ಕಾಸರಗೋಡು: ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷೆ ಕೆ. ಬೈಜುನಾಥ್ ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಸಬಾಂಗಣದಲ್ಲಿ ಸಿಟ್ಟಿಂಗ್ ನಡೆಯಿತು. . ಹಕ್ಕುಪತ್ರ ನೀಡಿರುವ ಮಿಗತೆ ಭೂಮಿಯನ್ನು ಅಳೆದು ಭೂಮಿ ಹಿಂದಿರುಗಿಸಲು ಮತ್ತು ಮುಂದಿನ ಸಭೆಯಲ್ಲಿ ವರದಿಗಳೊಂದಿಗೆ ಹಾಜರಾಗಲು ಕಾಂಞಂಗಾಡ್ ಆರ್‍ಡಿಒ ಹಾಗೂ ವೆಳ್ಳರಿಕುಂಡು ತಹಸೀಲ್ದಾರ್‍ಗೆ ಬೈಜುನಾಥ್ ನಿರ್ದೇಶ ನೀಡಿದರು.
ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು ಆಯೋಗದ ಗಮನಕ್ಕೆ ಬಂದಿದ್ದು, ಕೂಡಲೇ ಚರಂಡಿ ಸ್ವಚ್ಛಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಸಿಟ್ಟಿಂಗ್‍ನಲ್ಲಿ 49 ದೂರುಗಳನ್ನು ಪರಿಗಣಿಸಲಾಗಿದ್ದು, ಇವುಗಳಲ್ಲಿ 18 ದೂರುಗಳಿಗೆ ಪರಿಹಾರ ಕಲ್ಪಿಸಲಾಯಿತು. ಒಂದು ದೂರಿಗೆ ಸಂಬಂಧಿಸಿ ಅಧಿಕಾರಿಗಳಿಂದ ವರದಿ ಕೋರಲಾಯಿತು. 13 ದೂರುದಾರರು ಸಭೆಗೆ ಹಾಜರಾಗಿರಲಿಲ್ಲ.
ಕಾಞಂಗಾಡಿನ ವಿದ್ಯಾರ್ಥಿ ಮೊಹಮ್ಮದ್ ರಝಿಲ್ ಅವರು ಆದ್ಯತಾ ವರ್ಗದನ್ವಯ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿದ್ದಾರೆ ಎಂದು ಅಲ್ಪಸಂಖ್ಯಾತರ ಆಯೋಗ ಪ್ರಕಟಿಸಿದೆ. ಆಯೋಗದ ಸದಸ್ಯ ಪಿ. ರೋಜಾ ಈ ಬಗ್ಗೆ ಮಾಹಿತಿ ನೀಡಿದರು. ಅದೇ ರೀತಿ ಮುಗು ಸೇವಾ ಸಹಕಾರಿ ಬ್ಯಾಂಕಿನಲ್ಲಿ ಠೇವಣಿಯಿರಿಸಿದ್ದ 53800ರೂ. ವಾಪಾಸುಮಾಡುವ ನಿಟ್ಟಿನಲ್ಲಿ ಬೆಂಡಿಚಾಲ್ ನಿವಾಸಿ ಟಿ.ಎ.ಮ್ಯಾಥ್ಯೂ ಸಲ್ಲಿಸಿದ್ದ ಅರ್ಜಿ ಪರಿಗಣಿಸಲಾಗಿದ್ದು, ಬ್ಯಾಂಕ್ ಮ್ಯಾಥ್ಯೂ ಅವರಿಗೆ ಬಡ್ಡಿ ಸೇರಿ 1,01544 ರೂ. ನೀಡಿರುವುದಾಗಿ ತಿಳಿಸಲಾಯಿತು.
ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೂಲ ಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಬೇಕು ಹಾಗೂ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಸಾಕಷ್ಟು ವೈದ್ಯರನ್ನು ನೇಮಿಸಬೇಕು ಎಂದು ಒತ್ತಾಯಿಸಿ ತಳಂಗರೆ ನಿವಾಸಿ ಎ.ಎಂ.ಅಬ್ದುಲ್ ಸತ್ತಾರ್ ಸಲ್ಲಿಸಿರುವ ದೂರನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಆಯೋಗದ ಸದಸ್ಯ ಪಿ. ರೋಸಾ ತಿಳಿಸಿದರು.