ರೂರ್ಕೆಲಾ/ಕೌಶಾಂಬಿ: ಉತ್ತರ ಪ್ರದೇಶ, ಬಿಹಾರ ಹಾಗೂ ಒಡಿಶಾ ಸೇರಿದಂತೆ ಉತ್ತರದ ಹಲವು ರಾಜ್ಯಗಳಲ್ಲಿ ತಾಪಮಾನ ಹೆಚ್ಚಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿ, ಶಾಖಾಘಾತವೇ ಸಾವುಗಳಿಗೆ ಕಾರಣ ಎಂದು ಶಂಕಿಸಲಾಗಿದೆ.
ರೂರ್ಕೆಲಾ/ಕೌಶಾಂಬಿ: ಉತ್ತರ ಪ್ರದೇಶ, ಬಿಹಾರ ಹಾಗೂ ಒಡಿಶಾ ಸೇರಿದಂತೆ ಉತ್ತರದ ಹಲವು ರಾಜ್ಯಗಳಲ್ಲಿ ತಾಪಮಾನ ಹೆಚ್ಚಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿ, ಶಾಖಾಘಾತವೇ ಸಾವುಗಳಿಗೆ ಕಾರಣ ಎಂದು ಶಂಕಿಸಲಾಗಿದೆ.
ಒಡಿಶಾದ ರೂರ್ಕೆಲಾ ನಗರದಲ್ಲಿ ಗುರುವಾರ 10 ಜನರು ಹಾಗೂ ಬಿಹಾರದಲ್ಲಿ ನಾಲ್ವರು ಮೃತಪಟ್ಟಿದ್ದು, ಈ ಸಾವುಗಳಿಗೆ ಶಾಖಾಘಾತವೇ ಕಾರಣ ಎಂಬುದಾಗಿ ಶಂಕಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೋರಾಗಿ ಬೀಸಿದ ಗಾಳಿ ಪರಿಣಾಮ ಶೆಡ್ ಕುಸಿದು ಉತ್ತರ ಪ್ರದೇಶದಲ್ಲಿ ಶುಕ್ರವಾರ ಐವರು ಮೃತಪಟ್ಟಿದ್ಧಾರೆ.
ತಾತ್ಕಾಲಿಕ ಶೆಡ್ ಕುಸಿದ ಪರಿಣಾಮ ಶಹಜಹಾನ್‌ಪುರದಲ್ಲಿ ಮೂವರು ಮೃತಪಟ್ಟಿದ್ಧಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕಕುಮಾರ್ ಮೀನಾ ತಿಳಿಸಿದ್ದಾರೆ.
ಕೌಶಾಂಬಿಯಲ್ಲಿ ವೃದ್ಧೆ ಸೇರಿದಂತೆ ಇಬ್ಬರು ಶಾಖಾಘಾತದಿಂದ ಮೃತಪಟ್ಟಿದ್ದಾರೆ.
'ಈ ಇಬ್ಬರು ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ, ಬಿಸಿಲ ಆಘಾತದಿಂದ ಅಸ್ವಸ್ಥಗೊಂಡಿದ್ದರು. ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದ ಅರ್ಧ ಗಂಟೆಯಲ್ಲಿಯೇ ಅವರು ಮೃತಪಟ್ಟರು. ಬಿಸಿಲ ಆಘಾತದಿಂದ ಕಂಡುಬಂದ ತೊಂದರೆಗಳೇ ಅವರ ಸಾವಿಗೆ ಕಾರಣವಾಗಿರಬಹುದು' ಎಂದು ಕೌಶಾಂಬಿಯ ಮುಖ್ಯ ವೈದ್ಯಾಧಿಕಾರಿ ಸುಷ್ಪೇಂದ್ರಕುಮಾರ್ ಶುಕ್ರವಾರ ತಿಳಿಸಿದ್ದಾರೆ.
'ಗುರುವಾರ ಮಧ್ಯಾಹ್ನ 2 ಗಂಟೆ ನಂತರ ಆರು ತಾಸುಗಳ ಅವಧಿಯಲ್ಲಿ 10 ಜನರು ಮೃತಪಟ್ಟಿದ್ದಾರೆ' ಎಂದು ರೂರ್ಕೆಲಾ ಸರ್ಕಾರಿ ಆಸ್ಪತ್ರೆ ಉಸ್ತುವಾರಿ ನಿರ್ದೇಶಕಿ ಡಾ.ಸುಧಾರಾಣಿ ಪ್ರಧಾನ್ ತಿಳಿಸಿದ್ದಾರೆ.
'ಆಸ್ಪತ್ರೆಗೆ ಕರೆದುಕೊಂಡು ಬಂದ ವೇಳೆಗಾಗಲೇ 8 ಜನರು ಮೃತಪಟ್ಟಿದ್ದರು. ಉಳಿದವರು ಚಿಕಿತ್ಸೆ ನೀಡುವ ಸಮಯದಲ್ಲಿ ಮೃತಪಟ್ಟಿದ್ದಾರೆ' ಎಂದು ಹೇಳಿದ್ದಾರೆ.
'ಮೃತಪಟ್ಟವರ ದೇಹದ ಉಷ್ಣಾಂಶ 103-104 ಫ್ಯಾರೆನ್‌ಹೀಟ್‌ನಷ್ಟಿತ್ತು (39.4-40 ಡಿಗ್ರಿ ಸೆಲ್ಸಿಯಸ್). ಇಷ್ಟೊಂದು ಅಧಿಕ ತಾಪಮಾನವೇ ಸಾವಿಗೆ ಕಾರಣವಾಗಿರುವ ಸಾಧ್ಯತೆ ಇದೆ. ಆಸ್ಪತ್ರೆಗೆ ಬರುವ ಮೊದಲೇ ಮೃತಪಟ್ಟಿದ್ದರಿಂದ, ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಗೊತ್ತಾಗಲಿದೆ' ಎಂದೂ ಡಾ.ಪ್ರಧಾನ್ ಹೇಳಿದ್ದಾರೆ.