ಜಮ್ಮು: ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಮೇಲೆ ದಾಳಿ ನಡೆಸಿದ ಉಗ್ರರ ಪತ್ತೆಗಾಗಿ ಭದ್ರತಾ ಪಡೆಯು ಶೋಧ ಕಾರ್ಯವನ್ನು ಚುರುಕುಗೊಳಿಸಿದೆ.
ಭದ್ರತಾ ಪಡೆಯ 11 ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಜಮ್ಮು ಮತ್ತು ರಜೌರಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ತಪಾಸಣೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
ಘಟನೆ ಸಂಬಂಧ ವಿಚಾರಣೆಗಾಗಿ ಇದುವರೆಗೆ 20 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಜಮ್ಮುವಿನ ರಿಯಾಸಿ ಜಿಲ್ಲೆಯ ಪೋನಿ ಪ್ರದೇಶದ ತೇರ್ಯತ್ ಗ್ರಾಮದಲ್ಲಿ ಭಾನುವಾರ ಸಂಜೆ ಉಗ್ರರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಒಂಬತ್ತು ಯಾತ್ರಿಕರು ಮೃತಪಟ್ಟು, 41 ಮಂದಿ ಗಾಯಗೊಂಡಿದ್ದರು. ಉಗ್ರರು ಗುಂಡು ಹಾರಿಸಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಆಳವಾದ ಕಮರಿಗೆ ಉರುಳಿತ್ತು.
'ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್‌ನ ಪ್ರತ್ಯೇಕ ತಂಡಗಳು ಉಗ್ರರ ಬೇಟೆಗೆ ಜಂಟಿ ಕಾರ್ಯಾಚರಣೆಗಿಳಿದಿವೆ. ಉಗ್ರರ ಬಗ್ಗೆ ಕೆಲವೊಂದು ಮಹತ್ವದ ಸುಳಿವು ಲಭ್ಯವಾಗಿವೆ' ಎಂದು ಉಧಂಪುರ-ರಿಯಾಸಿ ವಲಯದ ಡಿಐಜಿ ರಯೀಸ್ ಮೊಹಮ್ಮದ್ ಬಟ್ ಹೇಳಿದ್ದಾರೆ.
ಘಟನೆ ನಡೆದ ಸ್ಥಳದ ಸುತ್ತಲಿನ ಪ್ರದೇಶಗಳಲ್ಲಿ ಈಗ ಶೋಧ ನಡೆಸಲಾಗುತ್ತಿದೆ. ಶೋಧ ಕಾರ್ಯಕ್ಕೆ ಡ್ರೋನ್ ಸೇರಿದಂತೆ ಅತ್ಯಾಧುನಿಕ ಕಣ್ಗಾವಲು ಉಪಕರಣಗಳು, ಶ್ವಾನಗಳು ಮತ್ತು ಒಂದು ಹೆಲಿಕಾಪ್ಟರ್‌ಅನ್ನು ಬಳಸಲಾಗಿದೆ ಎಂದು ಮಾಹಿತಿ ನೀಡಿದರು.
ಮೂವರು ಉಗ್ರರು ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ. ನಾಲ್ಕನೇ ವ್ಯಕ್ತಿ ಅವರಿಗೆ ಮಾಹಿತಿದಾರನಾಗಿ ನೆರವು ನೀಡಿರಬಹುದು ಎಂದು ಘಟನೆಯಲ್ಲಿ ಗಾಯಗೊಂಡವರ ಹೇಳಿಕೆಗಳನ್ನು ಆಧರಿಸಿ ಪೊಲೀಸರು ಹೇಳಿದ್ದಾರೆ. ಲಷ್ಕರ್ ಎ ತಯಬಾ ಸಂಘಟನೆಯ ಕಮಾಂಡರ್ ಅಬೂ ಹಮ್ಜಾನ ಸೂಚನೆಯಂತೆ ನಾಲ್ವರು ಉಗ್ರರು ಈ ದಾಳಿ ನಡೆಸಿದ್ದಾರೆ ಎಂದಿದ್ದಾರೆ.
ಮುಂದುವರಿದ ಭಕ್ತರ ಭೇಟಿ: ಭಯೋತ್ಪಾದಕ ದಾಳಿಯಿಂದ ವಿಚಲಿಗೊಳ್ಳದ ಭಕ್ತರು ಎಂದಿನಂತೆ ಶಿವ ಖೋರಿಯ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ಮುಂದುವರಿಸಿದ್ದಾರೆ. ಮಂಗಳವಾರ ಶಿವ ಖೋರಿಯತ್ತ ಪ್ರಯಾಣ ಬೆಳೆಸಿದ್ದ ಭಕ್ತರು ತಮ್ಮ ವಾಹನವನ್ನು ಉಗ್ರರ ದಾಳಿ ನಡೆದ ಸ್ಥಳದಲ್ಲಿ ಕೆಲಹೊತ್ತು ನಿಲ್ಲಿಸಿ, 'ಭಾರತ್ ಮಾತಾ ಕಿ ಜೈ', 'ಭಾರತಿಯ ಸೇನೆಗೆ ಜಿಂದಾಬಾದ್' ಎಂಬ ಘೋಷಣೆ ಕೂಗಿದರು. ದಾಳಿಯಲ್ಲಿ ಮೃತಪಟ್ಟವರಿಗಾಗಿ ಸಂತಾಪ ಸೂಚಿಸಿದರು.
18ರಿಂದ ಹೆಲಿಕಾಪ್ಟರ್ ಸೇವೆ
ಮಾತಾ ವೈಷ್ಣೋದೇವಿ ದೇವಾಲಯಕ್ಕೆ ತೆರಳುವ ಭಕ್ತರಿಗೆ ಅನುಕೂಲ ಕಲ್ಪಿಸಲು ಜಮ್ಮು ನಗರದಿಂದ ರಿಯಾಸಿ ಜಿಲ್ಲೆಗೆ ಜೂನ್ 18ರಿಂದ ಹೆಲಿಕಾಪ್ಟರ್ ಸಂಚಾರ ಆರಂಭಿಸಲಾಗುವುದು ಎಂದು ಶ್ರೀ ಮಾತಾ ವೈಷ್ಣೋದೇವಿ ದೇವಸ್ಥಾನ ಮಂಡಳಿ (ಎಸ್‌ಎಂವಿಡಿಬಿ) ಹೇಳಿದೆ. 'ಹೆಲಿಕಾಪ್ಟರ್ ಪ್ರಯಾಣ ಬ್ಯಾಟರಿ ಚಾಲಿಕ ಕಾರು ಆದ್ಯತೆಯ ಆಧಾರದಲ್ಲಿ ದರ್ಶನ ಸೌಲಭ್ಯ ಪ‍್ರಸಾದ ಮತ್ತು ರೋಪ್‌ವೇ ಸೇವೆಗಳನ್ನು ಪ್ಯಾಕೇಜ್ ರೂಪದಲ್ಲಿ ಒದಗಿಸಲಾಗಿದೆ. ಭಕ್ತರು ವೆಬ್‌ಸೈಟ್ ಮೂಲಕ ಬುಕಿಂಗ್ ಮಾಡಬಹುದು' ಎಂದರು.