ನವದೆಹಲಿ: ದೂರಸಂಪರ್ಕ ಕಾಯ್ದೆ-2023 ನಿಯಮಗಳು ಇದೇ ಜೂನ್ 26ರಂದು ಬಾಗಶಃ ಜಾರಿಗೆ ಬರಲಿವೆ ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ.
ಈ ಕಾಯ್ದೆಯ ಪರಿಣಾಮವಾಗಿ ದೂರಸಂಪರ್ಕ ಕ್ಷೇತ್ರದಲ್ಲಿ ಭಾರತೀಯ ಟೆಲಿಗ್ರಾಫ್ ಆಕ್ಟ್, 1885, ಭಾರತೀಯ ವೈರ್‌ಲೆಸ್ ಟೆಲಿಗ್ರಾಫಿ ಕಾಯ್ದೆ-1933 ಮತ್ತು ಟೆಲಿಗ್ರಾಫ್ ವೈರ್ಸ್ (ಅಕ್ರಮವಾಗಿ ಸ್ವಾಧೀನದಲ್ಲಿ ಇರಿಸಿಕೊಳ್ಳುವಿಕೆ) ಕಾಯ್ದೆ-1950ರ ಚೌಕಟ್ಟು ಬದಲಾಗಲಿವೆ.
'ದೂರಸಂಪರ್ಕ ಕಾಯ್ದೆ-2023ರ 1, 2, 10 ರಿಂದ 30, 42 ರಿಂದ 44, 46, 47, 50 ರಿಂದ 58, 61 ಹಾಗೂ 62 ಸೆಕ್ಷನ್‌ಗಳು ಜೂನ್ 26ರಂದು ಜಾರಿಗೆ ಬರಲಿವೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜೂನ್ 26 ರಂದು ಜಾರಿಯಾಗಲಿರುವ ನಿಯಮಗಳು, ವಿದೇಶಗಳೊಂದಿಗಿನ ಸೌಹಾರ್ದ ಸಂಬಂಧ ಅಥವಾ ಯುದ್ಧದ ಸಂದರ್ಭದಲ್ಲಿ ದೇಶದ ಭದ್ರತೆ ಅಥವಾ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ನಿರ್ದಿಷ್ಟ ಅಥವಾ ಎಲ್ಲಾ ದೂರಸಂಪರ್ಕ ಸೇವೆಗಳ ಮೇಲಿನ ನಿಯಂತ್ರಣ ಮತ್ತು ನಿರ್ವಹಣೆ ಮಾಡುವ ಅವಕಾಶವನ್ನು ಸರ್ಕಾರಕ್ಕೆ ನೀಡುತ್ತದೆ.
ಹೊಸ ನಿಯಮಗಳ ಜಾರಿಯಿಂದಾಗಿ, ಸಾರ್ವತ್ರಿಕ ಸೇವಾ ಬಾಧ್ಯತೆಯ ನಿಧಿಯು 'ಡಿಜಿಟಲ್ ಭಾರತ್' ನಿಧಿಯಾಗಿ ಮಾರ್ಪಾಡಾಗಲಿದೆ. ಇದನ್ನು ಗ್ರಾಮೀಣ ಪ್ರದೇಶಗಳಲ್ಲಿ ಟೆಲಿಕಾಂ ಸೇವೆಗಳ ಸ್ಥಾಪನೆಗಷ್ಟೇ ಅಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೂ ಬಳಸಿಕೊಳ್ಳಬಹುದಾಗಿದೆ.ಜೊತೆಗೆ, ಬಳಕೆದಾರರನ್ನು ಸ್ಪ್ಯಾಮ್ ಮತ್ತು ದುರುದ್ದೇಶದಿಂದ ಕೂಡಿದ ಸಂವಹನಗಳಿಂದ ರಕ್ಷಿಸುವಂತೆ ದೂರಸಂಪರ್ಕ ನೆಟ್‌ವರ್ಕ್‌ಗಳಿಗೆ ಈ ನಿಯಮಗಳು ಆದೇಶಿಸಲಿವೆ.