ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸುಮಾರು ಶೇ 89 ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಇವರಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗುಲಾಂ ನಬಿ ಆಜಾದ್ ಅವರ ಡಿಪಿಎಪಿಯ ಎಲ್ಲ ಮೂವರು ಅಭ್ಯರ್ಥಿಗಳು, ಬಿಜೆಪಿ ಬೆಂಬಲಿತ ಅಪ್ನಿ ಪಕ್ಷದ ಇಬ್ಬರು ಅಭ್ಯರ್ಥಿಗಳು ಮತ್ತು ಪಿಡಿಪಿ ಅಭ್ಯರ್ಥಿಗಳು ಸೇರಿದ್ದಾರೆ.
ಭಾರತದ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಒಟ್ಟು 100 ಅಭ್ಯರ್ಥಿಗಳು ಜಮ್ಮು ಮತ್ತು ಕಾಶ್ಮೀರದ ಉಧಂಪುರ, ಜಮ್ಮು, ಅನಂತನಾಗ್-ರಜೌರಿ, ಶ್ರೀನಗರ ಮತ್ತು ಬಾರಾಮುಲ್ಲಾದ ಐದು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು.
ಐದು ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಿದ್ದ 100 ಅಭ್ಯರ್ಥಿಗಳಲ್ಲಿ ಬಿಜೆಪಿಯ ಇಬ್ಬರು ವಿಜೇತ ಅಭ್ಯರ್ಥಿಗಳು, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಇಬ್ಬರು ವಿಜೇತ ಅಭ್ಯರ್ಥಿಗಳು, ಸ್ವತಂತ್ರ ಅಭ್ಯರ್ಥಿ ರಶೀದ್, ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಮಾಜಿ ಸಿಎಂ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಪಿಡಿಪಿ ನಾಯಕ ವಹೀದ್ ಪಾರಾ, ಪೀಪಲ್ಸ್ ಕಾನ್ಫರೆನ್ಸ್‌ನ ಸಜಾದ್ ಲೋನ್ ಮತ್ತು ಕಾಂಗ್ರೆಸ್‌ನ ಇಬ್ಬರು ಸೋತ ಅಭ್ಯರ್ಥಿಗಳು ತಮ್ಮ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದವರು ಠೇವಣಿ ಕಳೆದುಕೊಂಡಿದ್ದಾರೆ.
ಲೋಕಸಭೆ ಚುನಾವಣಾ ಫಲಿತಾಂಶದ ನಂತರ ತಾವು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಅಗತ್ಯವಿರುವ ಶೇ 16.67 ರಷ್ಟು ಮತಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಒಟ್ಟು 89 ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದಾರೆ.
ಚುನಾವಣೆಯ ನಿಯಮಗಳ ಪ್ರಕಾರ ಚಲಾವಣೆಯಾದ ಒಟ್ಟು ಮತಗಳಲ್ಲಿ 6ನೇ ಒಂದು ಭಾಗದಷ್ಟು ಮತ ಪಡೆಯಲು ಸಾಧ್ಯವಾಗದೇ ಇದ್ದರೆ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ನಿಯಮದ ಪ್ರಕಾರ, ಈ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ 89 ಜನರು ಠೇವಣಿ ಕಳೆದುಕೊಂಡಿದ್ದಾರೆ.
ಗುಲಾಂ ನಬಿ ಆಜಾದ್ ಅವರ ಡಿಪಿಎಪಿಯಿಂದ ಉಧಮ್‌ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗುಲಾಂ ನಬಿ ಸರೂರಿ ಅವರು ಕೇವಲ ಶೇ 3.56 ರಷ್ಟು ಮತ ಪಡೆದಿದ್ದರೆ, ಅನಂತನಾಗ್-ರಾಜೌರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೊಹಮ್ಮದ್ ಸಲೀಮ್ ಪರ್ರೆ ಕೇವಲ ಶೇ 2.47 ರಷ್ಟು ಮತ್ತು ಶ್ರೀನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಮೀರ್ ಅಹ್ಮದ್ ಭಟ್ ಕೇವಲ ಶೇ 2.24 ರಷ್ಟು ಮತಗಳನ್ನು ಗಳಿಸಿದ್ದಾರೆ.
ಬಿಜೆಪಿ ಬೆಂಬಲಿತ ಅಪ್ನಿ ಪಕ್ಷದ ಅಭ್ಯರ್ಥಿಗಳು ಅನಂತನಾಗ್ ಮತ್ತು ಶ್ರೀನಗರ ಲೋಕಸಭಾ ಕ್ಷೇತ್ರಗಳೆರಡರಲ್ಲೂ ಠೇವಣಿ ಕಳೆದುಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಐದು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ 100 ಅಭ್ಯರ್ಥಿಗಳಲ್ಲಿ 89 ಮಂದಿ ತಮ್ಮ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ 16.67 ರಷ್ಟು ಮತಗಳನ್ನು ಗಳಿಸಲು ವಿಫಲರಾಗಿದ್ದಾರೆ. ಹೀಗಾಗಿ, ಅವರು ಠೇವಣಿ ಕಳೆದುಕೊಂಡಿದ್ದಾರೆ. ಅದೇ ರೀತಿ, 100 ಅಭ್ಯರ್ಥಿಗಳಲ್ಲಿ 68 ಮಂದಿ ನೋಟಾಗಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ.