ತಿರುವನಂತಪುರಂ: 24 ಗಂಟೆ ವಿದ್ಯುತ್ ಪೂರೈಕೆ ಗ್ರಾಹಕರ ಹಕ್ಕು ಎಂದು ಕೇಂದ್ರ ವಿದ್ಯುತ್ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಯಾವುದೇ ವಿತರಣಾ ಕಂಪನಿ ತನ್ನ ವಿವೇಚನೆಯಿಂದ ಲೋಡ್ ಶೆಡ್ಡಿಂಗ್ ಹೇರಿದರೆ, ಅವರಿಂದ ಪರಿಹಾರ ಕೇಳುವ ಹಕ್ಕು ಗ್ರಾಹಕನಿಗೆ ಇದೆ ಎಂದು ಸೂಚಿಸಲಾಗಿದೆ.
ಕೇಂದ್ರ ವಿದ್ಯುತ್ ಸಚಿವಾಲಯವು 2003 ರ ವಿದ್ಯುತ್ ಕಾಯ್ದೆಯ ಸೆಕ್ಷನ್ 126 ರ ಅಡಿಯಲ್ಲಿ 31 -12- 2020 ರಂದು ಘೋಷಿಸಿದ ಗ್ರಾಹಕರ ವಿದ್ಯುತ್ ಹಕ್ಕುಗಳ ಪ್ರಕಾರ, ವಿದ್ಯುತ್ ವಿತರಣಾ ಕಂಪನಿಗಳು ಉದ್ದೇಶಪೂರ್ವಕವಾಗಿ ಲೋಡ್ ಶೆಡ್ಡಿಂಗ್ ಅನ್ನು ಹೇರಲು ಯಾವುದೇ ಹಕ್ಕನ್ನು ಹೊಂದಿಲ್ಲ. ಸಂಪರ್ಕ, ಸಂಪರ್ಕ ಕಡಿತಗೊಳಿಸುವಿಕೆ, ಮರು-ಸಂಪರ್ಕ, ವರ್ಗಾವಣೆ, ಗ್ರಾಹಕ ವರ್ಗ ಮತ್ತು ಲೋಡ್ ಬದಲಾವಣೆ, ವೋಲ್ಟೇಜ್ ಮತ್ತು ಬಿಲ್ ಸಂಬಂಧಿತ ದೂರುಗಳನ್ನು ಪರಿಹರಿಸುವುದು ಸೇರಿದಂತೆ ವಿವಿಧ ಸೇವೆಗಳಿಗೆ ವಿತರಣಾ ಕಂಪನಿಯು ತೆಗೆದುಕೊಳ್ಳಬಹುದಾದ ಗರಿಷ್ಠ ಸಮಯದ ಮಾನದಂಡಗಳನ್ನು ಕೇಂದ್ರ ಸರ್ಕಾರವು ಸೂಚಿಸಿದೆ. ಈ ಸೇವೆಗಳನ್ನು ಒದಗಿಸಲು ವಿಳಂಬವಾದರೆ, ವಿತರಣಾ ಕಂಪನಿಯು ಪರಿಹಾರವನ್ನು ಪಾವತಿಸಬೇಕಾಗುತ್ತದೆ. ನಿಯಮಗಳ ಪ್ರತಿಯನ್ನು https://powermin.gov.in ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.