ಗಾಜಾ: ಇಲ್ಲಿನ ಶಾಲೆಯನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 27 ಮಂದಿ ಮೃತಪಟ್ಟಿದ್ದಾರೆ. 'ಮೃತರೆಲ್ಲ ಹಮಾಸ್ ಉಗ್ರರು' ಎಂದು ಇಸ್ರೇಲ್ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಆದರೆ, ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದಾಗಿ ನೆಲೆ ಕಳೆದುಕೊಂಡಿರುವವರಿಗೆ ಶಾಲಾ ಆವರಣದಲ್ಲಿ ಆಶ್ರಯ ನೀಡಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗಾಜಾದ ಕೇಂದ್ರ ಭಾಗದಲ್ಲಿರುವ ನುಸೀರತ್‌ನಲ್ಲಿ ಇರುವ ವಿಶ್ವಸಂಸ್ಥೆಯ ಶಾಲೆಯಲ್ಲಿ ಹಮಾಸ್ ಉಗ್ರರು ಅಡಗಿದ್ದರು. 8 ತಿಂಗಳ ಹಿಂದೆ (2023ರ ಅಕ್ಟೋಬರ್ 7ರಂದು) ಇಸ್ರೇಲ್ ಮೇಲೆ ನಡೆಸಲಾದ ದಾಳಿಯ ಭಾಗವಾಗಿರುವ ಹಮಾಸ್ ಬಂಡುಕೋರರು ಶಾಲಾ ಆವರಣದ ಉಗ್ರರ ನೆಲೆಯಲ್ಲಿ ಇದ್ದರು ಎಂದು ಇಸ್ರೇಲ್ ಪ್ರತಿಪಾದಿಸಿದೆ. ನಾಗರಿಕರ ಸಾವು-ನೋವು ಆಗದಂತೆ ವಾಯುದಾಳಿಗೂ ಮುನ್ನ ಎಚ್ಚರದ ಕ್ರಮ ಕೈಗೊಳ್ಳಲಾಗಿದೆ ಎಂದೂ ಹೇಳಿದೆ.
ಹಮಾಸ್ ಸರ್ಕಾರಿ ಮಾಧ್ಯಮ ಕೇಂದ್ರದ ನಿರ್ದೇಶಕ ಇಸ್ಮಾಯಿಲ್ ಅಲ್-ಥಾವಬ್ತಾ ಅವರು, ಇಸ್ಲೇಲ್ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. 'ಸ್ಥಳಾಂತರಗೊಂಡಿದ್ದ ನಾಗರಿಕೆ ಮೇಲೆ ನಡೆಸಿದ ಕ್ರೂರ ದಾಳಿಯನ್ನು ಸಮರ್ಥಿಸಿಕೊಳ್ಳಲು ಕಪೋಲಕಲ್ಪಿತ ಕಥೆ ಕಟ್ಟಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.
ಕದನ ವಿರಾಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡಗಳು ಹೆಚ್ಚಾಗುತ್ತಿದೆ. ಇದರ ಹೊರತಾಗಿಯೂ, ಹಮಾಸ್ ನಿರ್ಮೂಲನೆಯಾಗುವವರೆಗೆ ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಇತ್ತೀಚೆಗೆ ಹೇಳಿತ್ತು. ಇದರ ಬೆನ್ನಲ್ಲೇ ವಾಯುದಾಳಿ ನಡೆಸಲಾಗಿದೆ.