ಐಜ್ವಾಲ್: ಮಿಜೋರಾಂನ ಐಜ್ವಾಲ್, ಕೊಲಾಸಿಬ್ ಮತ್ತಿತರ ಜಿಲ್ಲೆಯಲ್ಲಿ ನಿರಂತರ ಮಳೆ, ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲಾಸಿಬ್ ಜಿಲ್ಲೆಯ ಟ್ಲಾಂಗ್ ನದಿಯಲ್ಲಿ 34 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಮಂಗಳವಾರ ಐಜ್ವಾಲ್ ಜಿಲ್ಲೆಯ ಐಬಾವ್ಕ್ ಗ್ರಾಮದಲ್ಲಿ ಭೂಕುಸಿತದಿಂದ ಮಹಿಳೆ ಮತ್ತು ಆಕೆಯ ಪತಿ ನಾಪತ್ತೆಯಾಗಿದ್ದರು.
ಶುಕ್ರವಾರ ಅಸ್ಸಾಂ ಗಡಿಯಲ್ಲಿರುವ ಕೊಲಾಸಿಬ್ ಜಿಲ್ಲೆಯ ಹೊರ್ಟೋಕಿ ಗ್ರಾಮದ ನದಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಆಕೆಯ ದೇಹವನ್ನು ನದಿಯಿಂದ ಹೊರತೆಗೆದ ನಂತರ ಕೌನ್ಪುಯಿಗೆ ಕೊಂಡೊಯ್ಯಲಾಯಿತು. ಅಲ್ಲಿ ಆಕೆಯ ಕುಟುಂಬ ಸದಸ್ಯರು ಆಕೆಯ ಗುರುತನ್ನು ದೃಢಪಡಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಪತ್ತೆಯಾಗಿರುವ ಇತರ ಐವರ ಹುಡುಕಾಟ ನಡೆಯುತ್ತಿದೆ. ಮಂಗಳವಾರ ಐಜ್ವಾಲ್ ಜಿಲ್ಲೆಯ ಅನೇಕ ಕಡೆ ಸಂಭವಿಸಿದ ಭೂಕುಸಿತದಲ್ಲಿ 21 ಮಂದಿ ಸ್ಥಳೀಯರು,8 ಮಂದಿ ಹೊರ ರಾಜ್ಯದವರು ಮೃತಪಟ್ಟಿದ್ದರು. ಮುಖ್ಯಮಂತ್ರಿ ಲಾಲ್ದುಹೋಮ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ರೆಮಲ್ ಚಂಡಮಾರುತದಿಂದ ಉಂಟಾದ ಮಳೆಯಿಂದ ಉಂಟಾಗುವ ಅನಾಹುತಗಳನ್ನು ನಿಭಾಯಿಸಲು ಸರ್ಕಾರ 15 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಾಗಿ ಅವರು ಹೇಳಿದ್ದಾರೆ.