ನವದೆಹಲಿ: 'ಅಮುಲ್' ಬ್ರಾಂಡ್‌ನಡಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾ ಮಂಡಳವು (ಜಿಸಿಎಂಎಂಎಫ್) ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಿದೆ.
ದೇಶದಾದ್ಯಂತ ಇಂದಿನಿಂದಲೇ (ಸೋಮವಾರ) ಈ ದರ ಜಾರಿಗೆ ಬಂದಿದೆ. ಉತ್ಪಾದನಾ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಾರಾಟ ದರವನ್ನು ಹೆಚ್ಚಿಸಲಾಗಿದೆ ಎಂದು ಜಿಸಿಎಂಎಂಎಫ್ ನಿರ್ದೇಶಕ ಜಯೆನ್ ಮೆಹ್ತಾ ತಿಳಿಸಿದ್ದಾರೆ.
ಕೊನೆಯ ಬಾರಿ 2023ರ ಫೆಬ್ರುವರಿಯಲ್ಲಿ ಹಾಲಿನ ದರ ಹೆಚ್ಚಳ ಮಾಡಲಾಗಿತ್ತು. ರೈತರ ಉತ್ಪಾದನಾ ವೆಚ್ಚವನ್ನು ಸರಿದೂಗಿಸುವ ಸಲುವಾಗಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಹೊಸ ದರ ಜಾರಿಗೆ ಬಂದ ಬಳಿಕ ಅಮುಲ್ ತಾಜಾ ಹಾಲು ಲೀಟರ್‌ಗೆ ₹58, ಒಂದು ಲೀಟರ್ ಅಮುಲ್ ಗೋಲ್ಡ್ ಹಾಲಿಗೆ ₹68, ಒಂದು ಲೀಟರ್ ಅಮುಲ್ ಎ2 ಎಮ್ಮೆ ಹಾಲು ₹73 ವೆಚ್ಚವಾಗಲಿದೆ.
ಹೊಸ ದರ ಜಾರಿಗೆ ಬಂದ ಬಳಿಕ ಅಮುಲ್ ತಾಜಾ ಹಾಲು ಅರ್ಧ ಲೀಟರ್‌ಗೆ ₹30, ಅಮುಲ್ ಗೋಲ್ಡ್ ₹33, ಎಮ್ಮೆ ಹಾಲು ₹36ಕ್ಕೆ ವೆಚ್ಚವಾಗಲಿದೆ.