ಕಾಸರಗೋಡು: ನೆಹರು ಯುವ ಕೇಂದ್ರ ಕಾಸರಗೋಡು ಹಾಗೂ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ.2 ಕಾಸರಗೋಡು ಜಂಟಿಯಾಗಿ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ಪ್ರದರ್ಶನವನ್ನು ಶಾಲೆಯಲ್ಲಿ ಆಯೋಜಿಸಲಾಗಿತ್ತು. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡಿರುವ ಯೋಗದ ಅನೇಕ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಐಎಎಸ್ ಯೋಗ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಯೋಗಾಭ್ಯಾಸದಿಂದ ವೈಯಕ್ತಿಕ ಸ್ವಾಸ್ಥ್ಯ, ಆಂತರಿಕ ಶಾಂತಿ ಜತೆಗೆ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗುವುದಾಗಿ ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕ ಬಿನೋಜ್ ಬೋಸ್ ಅಧ್ಯಕ್ಷತೆ ವಹಿಸಿದ್ದರು. ನೆಹರೂ ಯುಕೇಂದ್ರ ಜಿಲ್ಲಾ ಯುವ ಅಧಿಕಾರಿ ಅಖಿಲ್ ಪಿ, ಶಾಲಾ ಶಿಕ್ಷಕಿ ಮಾಯಾ ಜಿ ಹಾಗೂ ಶಾಲಾ ವಿಎಂಸಿ ಸದಸ್ಯರಾದ ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು. ನಂತರ ಯೋಗ ಶಿಕ್ಷಕಿ ರಮ್ಯಾ ಕಮಲ್ ನೇತೃತ್ವದಲ್ಲಿ ಸಾಮಾನ್ಯ ಯೋಗ ಶಿಷ್ಟಾಚಾರದಂತೆ ಯೋಗ ಪ್ರದರ್ಶನ ನಡೆಯಿತು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಕವಿತಾ ಎಸ್ ಪಿಳ್ಳೈ ವಂದಿಸಿದರು.