ನವದೆಹಲಿ: ಲಡಾಖ್‌ನ ಪಕ್ಷೇತರ ಸಂಸದ ಮೊಹಮ್ಮದ್ ಹನೀಫ್ ಅವರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದ 'ಇಂಡಿಯಾ' ಮೈತ್ರಿಕೂಟದ ಸದಸ್ಯರ ಬಲ ಮಂಗಳವಾರ 237ಕ್ಕೆ ಏರಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದರು.
ಇತ್ತೀಚೆಗೆ ಪಕ್ಷೇತರ ಸಂಸದರಾದ ವಿಶಾಲ್ ಪಾಟೀಲ್ (ಮಹಾರಾಷ್ಟ್ರದ ಸಾಂಗ್ಲಿ ಕ್ಷೇತ್ರ) ಮತ್ತು ಪಪ್ಪು ಯಾದವ್ (ಬಿಹಾರದ ಪೂರ್ಣಿಯಾ ಕ್ಷೇತ್ರ) ಅವರು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದರು. ಅದರ ಬೆನ್ನಲ್ಲೇ ಹನೀಫ್ ಅವರ ಬೆಂಬಲವೂ ದೊರೆತಿದೆ.
ಮೂವರು ಪಕ್ಷೇತರ ಸಂಸದರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಅನರ್ಹತೆಯ ತೂಗುಕತ್ತಿ ಇರುವ ಕಾರಣ ಅವರು ಬೆಂಬಲವನ್ನಷ್ಟೇ ಘೋಷಿಸಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 20 ಪಕ್ಷಗಳ 'ಇಂಡಿಯಾ' ಮೈತ್ರಿಕೂಟ 234 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಎನ್‌ಡಿಎ 293 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
'ಇಂದಿನವರೆಗೆ ಲೋಕಸಭೆಯಲ್ಲಿ ಬಿಜೆಪಿ 240 ಸ್ಥಾನಗಳು, ಇಂಡಿಯಾ ಮೈತ್ರಿ 237 ಸ್ಥಾನಗಳನ್ನು ಹೊಂದಿದೆ. ಪಶ್ಚಿಮ ಬಂಗಾಳದ ಮೂವರು ಬಿಜೆಪಿ ಸಂಸದರು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಅವರು ನಮ್ಮನ್ನು ಸೇರಲಿದ್ದಾರೆ. ಆ ಬಳಿಕ ಇಂಡಿಯಾ ಮೈತ್ರಿಯ ಸಂಖ್ಯೆ 240ಕ್ಕೆ ಏರಿಕೆಯಾಗಲಿದೆ. ಮೋದಿ ಅವರ ಮೈತ್ರಿ ಹೆಚ್ಚು ಕಾಲ ಉಳಿಯುವುದಿಲ್ಲ' ಎಂದು ಟಿಎಂಸಿಯ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.