ಕಾಸರಗೋಡು: ವಿದ್ಯಾರ್ಥಿಗಳ ಕೈವಶವಿರುವ ಹಳೇ ಉಚಿತ ಪ್ರಯಾಣದ ಪಾಸ್ ಜೂನ್ 30ರ ವರೆಗೆ ಬಳಸಿಕೊಳ್ಳಲು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಯಿತು. ಎಡಿಎಂ ಚೇಂಬರ್‍ನಲ್ಲಿ ಎಡಿಎಂ ಕೆ.ವಿ ಶ್ರುತಿ ಅಧ್ಯಕ್ಷತೆಯಲ್ಲಿ ನಡೆದ ವಿದ್ಯಾರ್ಥಿ ಪ್ರಯಾಣ ಸೌಲಭ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಕೆಎಸ್‍ಆರ್‍ಟಿಸಿ ಪ್ರಯಾಣದ ಪಾಸ್‍ಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಾಸ್ ವಿತರಣೆಯಾಗುತ್ತಿಲ್ಲ ಎಂಬ ದೂರೂ ಸಭೆಯಲ್ಲಿ ಕೇಳಿ ಬಂದಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
ಟ್ರಾವೆಲ್ ಪಾಸ್‍ಗಳನ್ನು ನಕಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂತಹ ಪಾಸ್‍ಗಳನ್ನು ರದ್ದುಗೊಳಿಸಲಾಗುವುದು. ಟ್ರಿಪ್ ಕಡಿತಗೊಳಿಸುವ ಬಸ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾನ್ಯ ಕೋರ್ಸ್‍ಗಳಿಗೆ ಮಾತ್ರ ಪಾಸ್ ಅನ್ನು ಅನುಮತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಯಾಣ ಪಾಸ್‍ಗಾಗಿ ಅರ್ಜಿಯ ಎರಡು ಪ್ರತಿಗಳನ್ನು ಆರ್‍ಟಿಓ ಕಚೇರಿಯಲ್ಲಿ ಲಭ್ಯವಾಗುವಂತೆ ಮಾಡಬೇಕು. ಶಾಲಾ ಬಸ್‍ಗಳು ಪಾಲಿಸಬೇಕಾದ ನಿರ್ದೇಶಗಳನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಬಸ್ ಮಾಲಿಕರು ಸೌಹಾರ್ದಯುತವಾಗಿ ಸಾಗಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.
ಬಸ್ ಮಾಲಿಕರ ಸಂಘದ ಪ್ರತಿನಿಧಿಗಳಾದ ಸಿ.ಎ.ಮುಹಮ್ಮದ್‍ಕುಞÂ, ಲಕ್ಷ್ಮಣನ್, ಸತ್ಯನ್ ಪೂಚಕ್ಕಾಡ್, ಎ.ವಿ.ಪ್ರದೀಪ್ ಕುಮಾರ್, ಕೆ.ವಿ.ರವಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸೈಯದ್ ತಾಹ, ಇಮ್ಯಾನುಯೆಲ್ ಎ, ಶಿಕ್ಷಣ ಇಲಾಖೆಯ ಅಜಿತಾ, ಸರ್ಕಾರಿ ಪಾಲಿಟೆಕ್ ಪ್ರಾಂಶುಪಾಲ ಪಿ. ನಾರಾಯಣ ನಾಯ್ಕ್, ಡಿಸಿಆರ್‍ಬಿ ಎಸ್‍ಐ ಎನ್.ಕೆ.ದಿನೇಶ್, ಟ್ರಾಫಿಕ್ ಎಸ್‍ಐ ಮೊಹಮ್ಮದ್ ಹಾರಿಸ್, ಕೆಎಸ್‍ಆರ್‍ಟಿಸಿ ಪ್ರತಿನಿಧಿ ಆರ್.ರಾಜು, ಆರ್‍ಟಿಒ ಹಿರಿಯ ಅಧೀಕ್ಷಕ ವಿ. ವಿನೋದ್ ಕುಮಾರ್ ಭಾಗವಹಿಸಿದ್ದರು.