ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಈ ಬಾರಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳು ಗರಿಷ್ಠ ಪ್ರಾತಿನಿಧ್ಯ ಪಡೆದುಕೊಂಡಿದೆ.
ಅತಿ ಹೆಚ್ಚು 80 ಕ್ಷೇತ್ರಗಳಿರುವ ಉತ್ತರ ಪ್ರದೇಶವು ಒಂಬತ್ತು ಸಚಿವ ಸ್ಥಾನಗಳನ್ನು ಪಡೆದುಕೊಂಡಿದೆ, ಇದರಲ್ಲಿ ಒಂದು ಸಂಪುಟ ಸ್ಥಾನ ಸೇರಿದೆ.
ಇತ್ತ, ಮಹಾರಾಷ್ಟ್ರದಲ್ಲಿ ಇಬ್ಬರು ಕ್ಯಾಬಿನೆಟ್ ಸಚಿವರು ಸೇರಿದಂತೆ ಆರು ಮಂದಿ ಸಚಿವ ಸ್ಥಾನ ಪಡೆದಿದ್ದು, (ಬಿಜೆಪಿಯ ನಾಲ್ಕು ಮತ್ತು ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಆರ್‌ಪಿಐ (ಎ) ತಲಾ ಒಂದು ಸ್ಥಾನ) ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಸಂಪುಟದಲ್ಲಿ ತಲಾ ಐದು ಸದಸ್ಯರನ್ನು ಹೊಂದಿವೆ.
ಹರಿಯಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ ಮೂವರಿಗೆ ಮಂತ್ರಿಗಿರಿ ಸಿಕ್ಕಿದ್ದು, ಒಡಿಶಾ, ಅಸ್ಸಾಂ, ಜಾರ್ಖಂಡ್, ತೆಲಂಗಾಣ, ಪಂಜಾಬ್, ಪಶ್ಮಿಮ ಬಂಗಾಳ ಮತ್ತು ಕೇರಳದಿಂದ ತಲಾ ಇಬ್ಬರು ಮೋದಿ ಸಂಪುಟ ಸೇರಿದ್ದಾರೆ.
ರಾಜನಾಥ್ ಸಿಂಗ್ ಉತ್ತರ ಪ್ರದೇಶದ ಏಕೈಕ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಗುಜರಾತ್‌ನ ನಾಲ್ಕು ಕ್ಯಾಬಿನೆಟ್ ಮಂತ್ರಿಗಳಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಮನ್ಸುಖ್ ಮಾಂಡವಿಯಾ ಮತ್ತು ಸಿ. ಆರ್. ಪಾಟೀಲ್ ಸೇರಿದ್ದಾರೆ.
ಮಧ್ಯಪ್ರದೇಶದಿಂದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವಾಣ್, ವೀರೇಂದ್ರ ಕುಮಾರ್ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಮಹಾರಾಷ್ಟ್ರದಿಂದ ನಿತಿನ್ ಗಡ್ಕರಿ ಮತ್ತು ಪಿಯೂಷ್ ಗೋಯಲ್ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ತಮಿಳುನಾಡಿನಲ್ಲಿ ಇಬ್ಬರು ಪ್ರಮುಖ ಕ್ಯಾಬಿನೆಟ್ ಮಂತ್ರಿಗಳು ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಮತ್ತು ಎಲ್ ಮುರುಗನ್ ರಾಜ್ಯ ಸಚಿವರಾಗಿದ್ದಾರೆ. ನೀಲಗಿರಿ ಲೋಕಸಭಾ ಕ್ಷೇತ್ರದಿಂದ ಸೋತಿರುವ ಮುರುಗನ್ ಮಧ್ಯಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ.
ಕರ್ನಾಟಕದಲ್ಲಿ ಇಬ್ಬರು ಕ್ಯಾಬಿನೆಟ್ ಸಚಿವರಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಪ್ರಲ್ಹಾದ್ ಜೋಶಿ ಸಂಪುಟ ಸೇರಿದ ಪ್ರಮುಖರು.