ನವದೆಹಲಿ: 'ಮನ್ ಕಿ ಬಾತ್' ಮಾಸಿಕ ರೇಡಿಯೊ ಕಾರ್ಯಕ್ರಮ ಮತ್ತೆ ಪುನರಾರಂಭಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕಾರ್ಯಕ್ರಮ ಜೂನ್ 30ರಿಂದ ಪುನರಾರಂಭವಾಗಲಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮೋದಿ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ತಮ್ಮ ಆಲೋಚನೆಗಳನ್ನು ಇಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ಹೇಳಿದ್ದಾರೆ.
ಚುನಾವಣೆ ಕಾರಣದಿಂದಾಗಿ ಕೆಲವು ತಿಂಗಳುಗಳ ನಂತರ #MannKiBaat ಮತ್ತೆ ಬಂದಿದೆ ಎಂದು ಹೇಳಲು ಸಂತೋಷವಾಗಿದೆ! ಈ ತಿಂಗಳ ಕಾರ್ಯಕ್ರಮವು ಜೂನ್ 30ರ ಭಾನುವಾರದಂದು ಬರಲಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯವರ ಮಾಸಿಕ 'ಮನ್ ಕಿ ಬಾತ್' ಕಾರ್ಯಕ್ರಮ ಫೆಬ್ರವರಿ 25ರಂದು ಕಡೆಯದಾಗಿ ಪ್ರಸಾರವಾಗಿತ್ತು. ಇದು 110ನೇ ಸಂಚಿಕೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ದಾಖಲೆಯ ಸಂಖ್ಯೆಯಲ್ಲಿ ಹಾಗೂ ದೇಶದ ಹಿತಕ್ಕಾಗಿ ಮತ ಚಲಾಯಿಸುವಂತೆ ಮನವಿ ಮಾಡಿದ್ದರು. ಇದರ ಬಳಿಕ 'ಮನ್ ಕಿ ಬಾತ್' ಪ್ರಸಾರವಾಗಿರಲಿಲ್ಲ.
ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು.