ಕಾಸರಗೋಡು: ನಗರದ ಜನರಲ್ ಆಸ್ಪತ್ರೆಯಲ್ಲಿ ಅಸೌಖ್ಯ ಬಾಧಿಸಿ ಮೃತಪಟ್ಟ ಗೃಹಿಣಿಯ 37ದಿವಸ ಪ್ರಾಯದ ಹಸುಗೂಸಿಗೆ ಸ್ವತ: ಎದೆಹಾಲುಣಿಸುವ ಮೂಲಕ ಆಸ್ಪತ್ರೆ ದಾದಿಯೊಬ್ಬರು 'ಅಮ್ಮ'ನ ಸ್ಥಾನ ತುಂಬಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜನರಲ್ ಆಸ್ಪತ್ರೆ ನರ್ಸಿಂಗ್ ಆಫೀಸರ್ ಮೆರಿನ್ ಬೆನ್ನಿ ಮಾನವೀಯತೆ ಮೆರೆದ ದಾದಿ.
ಮೂಲತ: ಅಸ್ಸಾಂ ನಿವಾಸಿ ಹಾಗೂ ಪ್ರಸಕ್ತ ಕುಣಿಯದ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿರುವ ರಾಜೇಶ್ ಬರ್ಮನ್ ಎಂಬವರ ಪತ್ನಿ ಏಕದಶಿ ಮಾಲಿ ಎಂಬವರು ಮೇ 5ರಂದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ನಂತರ ವಾಂತಿಭೇದಿ ಕಾಣಿಸಿಕೊಂಡಿತ್ತು. ಕಳೆದ ಮಂಗಳವಾರ ಈಕೆಯನ್ನು ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದರು. ಮೃತದೇಹ ಶವಾಗಾರಕ್ಕೆ ಸಾಗಿಸುತ್ತಿದ್ದಂತೆ ಎಳೆಯ ಮಗು ರಿಯಾಬರ್ಮನ್ ಹಸಿವೆಯಿಂದ ಚೀರಾಡಲಾರಂಭಿಸಿದೆ. ಇದನ್ನು ಕಂಡು ಮನಕರಗಿದ ದಾದಿ ಮಗುವನ್ನು ಎತ್ತಿ ತಾನು ಎದೆಹಾಲುಣಿಸುತ್ತಿದ್ದಂತೆ ಮಗು ಅಳು ನಿಲ್ಲಿಸಿದೆ. ಒಂದು ವರ್ಷದ ಮಗುವನ್ನು ಹೊಂದಿರುವ ಮೆರಿನ್ ಬೆನ್ನಿ ಅವರಿಗೆ, ಆ ಎಳೆಯ ಮಗುವಿನ ಅಳುವಿನಿಂದ ತನ್ನ ಮಗುವಿನ ನೆನಪಾಗಿ, ಖುದ್ದು ಎತ್ತಿಕೊಂಡು ಎದೆಹಾಲು ಉಣಿಸಲು ಪ್ರೇರಣೆ ನೀಡಿತ್ತು. ಮೆರಿನ್ ಬೆನ್ನಿ ಅವರು ಬಂದಡ್ಕ ನಿವಾಸಿ ಬಿಪಿನ್ ಥಾಮಸ್ ಅವರ ಪತ್ನಿ.