ಕಲ್ಲಕುರಿಚ್ಚಿ/ ಚೆನ್ನೈ: ಇಲ್ಲಿನ ಕರುಣಾಪುರಂ ಪ್ರದೇಶದಾದ್ಯಂತ ಗುರುವಾರ ಕಳ್ಳಭಟ್ಟಿ ಸೇವನೆಯಿಂದ ಸಾವನ್ನಪ್ಪಿದ್ದ ಕುಟುಂಬ ಸದಸ್ಯರ ಆರ್ತನಾದ, ಗೋಳಾಟಕ್ಕೆ ಸಾಕ್ಷಿಯಾಯಿತು. ಇದುವರೆಗೂ ದುರಂತದಲ್ಲಿ 38 ಮಂದಿ ಮೃತಪಟ್ಟಿದ್ದು, ಕೆಲವು ಮಕ್ಕಳು ಅನಾಥರಾಗಿದ್ದಾರೆ.
ಮೃತರಲ್ಲಿ ಇಬ್ಬರು ಮಹಿಳೆಯರು, ಒಬ್ಬರು ತೃತೀಯಲಿಂಗಿ ಕೂಡ ಸೇರಿದ್ದಾರೆ.
'ಸಾವಿನ ಸಂಖ್ಯೆ 38ಕ್ಕೆ ತಲುಪಿದೆ. ಕಲ್ಲಕುರಿಚ್ಚಿ ಸರ್ಕಾರಿ ಆಸ್ಪತ್ರೆಯಲ್ಲಿ 23 ಮಂದಿ, ಪಾಂಡಿಚೇರಿ(3), ಸಲೇಂ(8), ವಿಲ್ಲುಪುರಂ(4) ಮೃತಪಟ್ಟಿದ್ದಾರೆ' ಎಂದು ಲೋಕೋಪಯೋಗಿ ಸಚಿವ ಇ.ವಿ.ವೇಲು ತಿಳಿಸಿದರು.
ಗುರುವಾರ ಕರುಣಾಪುರಂನ ಪ್ರತೀ ಮನೆ ಮುಂದೆ ಆತಂಕ ಮನೆ ಮಾಡಿತ್ತು. ಕೆಲವರು ಹತ್ತಿರದವರನ್ನೂ ಕಳೆದುಕೊಂಡಿದ್ದರೆ, ಆಸ್ಪತ್ರೆಗೆ ದಾಖಲಾದವರ ಸ್ಥಿತಿಗತಿ ಕುರಿತು ಮಾಹಿತಿಗಾಗಿ ಎದುರು ನೋಡುತ್ತಿದ್ದರು.
ಘಟನೆ ಬಳಿಕ 100ಕ್ಕೂ ಅಧಿಕ ಮಂದಿಯನ್ನು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಈ ಘಟನೆಯು ನನಗೆ ತೀವ್ರ ದುಃಖ ಉಂಟುಮಾಡಿದೆ. ಮೆಥನಾಲ್ ಮಿಶ್ರಿತ ಕಳ್ಳಭಟ್ಟಿ ಸೇವನೆಯಿಂದಲೇ ಎಲ್ಲರೂ ಮೃತಪಟ್ಟಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾದವರ ಮೇಲೆ ವಿಶೇಷ ಗಮನಹರಿಸುವಂತೆ ವೈದ್ಯರಿಗೂ ಸೂಚನೆ ನೀಡಿದ್ದೇನೆ' ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದರು.
ಪರಿಸ್ಥಿತಿ ಕುರಿತಂತೆ ಸಭೆ ನಡೆಸಿ, 'ಸಾವಿಗೆ ಕಾರಣವಾದ ಅಂಶಗಳ ಕುರಿತು ಗಮನಹರಿಸುವ ಜೊತೆಗೆ ಭವಿಷ್ಯದಲ್ಲಿ ಇಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಗೋಕುಲ್‌ದಾಸ್ ಆಯೋಗ ರಚಿಸಲಾಗುವುದು' ಎಂದು ಈ ವೇಳೆ ಪ್ರಕಟಿಸಿದರು.
'ವಿಷಪೂರಿತ ಕಳ್ಳಭಟ್ಟಿ ಮಾರಾಟಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಸಾವನ್ನಪ್ಪಿದ ಕುಟುಂಬದ ಸದಸ್ಯರಿಗೆ ತಲಾ ₹10 ಲಕ್ಷ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ₹50 ಸಾವಿರ ಆರ್ಥಿಕ ನೆರವು ನೀಡಲಾಗುವುದು. ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ, ಡಿಜಿಪಿ ಅವರು ಸಮಗ್ರವಾಗಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ' ಎಂದು ಸ್ಟಾಲಿನ್ ತಿಳಿಸಿದರು.
ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮಯ್ ಸಿಂಗ್ ಮೀನಾ ಅವರನ್ನು ಅಮಾನತುಗೊಳಿಸಿದ್ದು, ಜಿಲ್ಲಾಧಿಕಾರಿ ಶ್ರವಣ್ ಕುಮಾರ ಅವರನ್ನು ವರ್ಗಾವಣೆ ಮಾಡಲಾಗಿದೆ.
ಪ್ರತಿಪಕ್ಷ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ನೀಡಿದರು. ಈ ಪೈಕಿ ಹೆತ್ತವರನ್ನು ಕಳೆದುಕೊಂಡ ಮೂವರು ಮಕ್ಕಳಿಗೂ ಧೈರ್ಯ ತುಂಬಿದರು.
'ಮಾರಾಟದ ಹಿಂದೆ ದೊಡ್ಡ ಗ್ಯಾಂಗ್‌ನ ಕೈವಾಡವಿದೆ. ಡಿಎಂಕೆ ಸರ್ಕಾರದ ಜೊತೆ ನಂಟು ಹೊಂದಿರುವ ವ್ಯಕ್ತಿಯೇ ಈ ಕಳ್ಳಬಟ್ಟಿ ಮದ್ಯ ಮಾರಾಟದಲ್ಲಿ ಭಾಗಿಯಾಗಿದ್ದಾರೆ. ಇಲ್ಲದಿದ್ದರೆ, ಪೊಲೀಸ್ ಠಾಣೆ, ನ್ಯಾಯಾಲಯದ ಸಮೀಪದಲ್ಲಿ ಕಳ್ಳಭಟ್ಟಿ ಮಾರಾಟ ನಡೆದಿದ್ದು ಹೇಗೆ' ಎಂದು ಅವರು ಪ್ರಶ್ನಿಸಿದರು.
ನಿರ್ಲಕ್ಷ್ಯದಿಂದಲೇ ಸಾವಿನ ಹೆಚ್ಚಳ: 'ಕಳ್ಳಬಟ್ಟಿ ಸೇವನೆಯಿಂದ ಬುಧವಾರವೇ ನಾಲ್ಕೈದು ಮಂದಿ ಸಾವನ್ನಪ್ಪಿದ್ದರು, ಆದರೆ ಇದೇ ಕಾರಣದಿಂದಲೇ ಸಾವನ್ನಪ್ಪಿದ್ದರು ಎಂಬುದನ್ನು ಪೊಲೀಸರು ಖಚಿತಪಡಿಸಿರಲಿಲ್ಲ. ಇದರಿಂದ, ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಕಳ್ಳಭಟ್ಟಿಯನ್ನು ಹಲವು ಮಂದಿ ಸೇವಿಸಿದ್ದರಿಂದಲೇ ಸಾವಿನ ಸಂಖ್ಯೆ ಏರಿಕೆಯಾಗಲು ಕಾರಣ' ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಯೂ ಈ ಪ್ರಕರಣ ಪ್ರತಿಧ್ವನಿಸಿತು. 'ಎಕ್ಸ್'ನಲ್ಲಿ ಹಲವಾರು ಸ್ಟಾಲಿನ್ ರಾಜೀನಾಮೆಗೆ ಆಗ್ರಹಿಸಿದರು. 'ದ್ರಾವಿಡ ಮಾದರಿ', 'ಸರವಾ ಮಾದರಿ' ಹ್ಯಾಷ್‌ಟ್ಯಾಗ್ ಬಳಸಿ ಸಂದೇಶಗಳನ್ನು ಪೋಸ್ಟ್ ಮಾಡಿದರು.
ಡಿಎಂಕೆ ಸರ್ಕಾರದ ಅಸಮರ್ಥತೆ ಹಾಗೂ ಕಳ್ಳಭಟ್ಟಿ ಮಾರಾಟ ತಡೆಯಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜೂನ್ 22ರಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು' ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ತಿಳಿಸಿದರು.
ಸಿಐಡಿ ಅಧಿಕಾರಿಗಳು ಕೂಡ ತನಿಖೆ ಆರಂಭಿಸಿದ್ದಾರೆ. ಮೆಥನಾಲ್‌ನ ಮೂಲ ಹಾಗೂ ಸ್ಥಳೀಯ ಮಟ್ಟದಲ್ಲಿ ಸಂಪೂರ್ಣವಾಗಿ ನಾಶಗೊಳಿಸುವಂತೆ ಮುಖ್ಯಮಂತ್ರಿ ಸ್ಟಾಲಿನ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ, 200 ಲೀಟರ್ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಗ್ಯ ಸಚಿವ ಮಾ. ಸುಬ್ರಹ್ಮಣಿಯನ್ ಹಾಗೂ ಲೋಕೋಪಯೋಗಿ ಸಚಿವ ಇ.ವಿ.ವೇಲು ಸಂತ್ರಸ್ತರಿಗೆ ನೆರವು ನೀಡಿದ್ದಾರೆ. ಜಿಲ್ಲಾಧಿಕಾರಿ ಎಂ.ಎಸ್. ಪ್ರಶಾಂತ್ ಪ್ರಕಾರ, 116 ಮಂದಿಯನ್ನು ಸರ್ಕಾರದ ವಿವಿಧ ಆಸ್ಪತ್ರೆಗೆ ದಾಖಲಿಸಿದ್ದು, ಈ ಪೈಕಿ 38 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಕಲ್ಲಕುರಿಚ್ಚಿಯಲ್ಲಿ ಕಳ್ಳಭಟ್ಟಿ ಸೇವನೆಯಿಂದ ಸಾವನ್ನಪ್ಪಿದ ಸಂತ್ರಸ್ತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಕುಟುಂಬ ಸದಸ್ಯರು-ಪಿಟಿಐ ಚಿತ್ರ ಕಲ್ಲಕುರಿಚ್ಚಿಯಲ್ಲಿ ಕಳ್ಳಭಟ್ಟಿ ಸೇವನೆಯಿಂದ ಸಾವನ್ನಪ್ಪಿದ ವ್ಯಕ್ತಿಯ ಮುಂದೆ ಕಣ್ಣೀರಿಡುತ್ತಿರುವ ಮಹಿಳೆ- ಪಿಟಿಐ ಚಿತ್ರ ಕಳ್ಳಭಟ್ಟಿ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರನ್ನು ಗುರುವಾರ ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯನ್ ಸಚಿವ ಉದಯನಿಧಿ ಸ್ಟಾಲಿನ್ ಭೇಟಿಯಾದರು-ಪಿಟಿಐ ಚಿತ್ರ ಕಲ್ಲಕುರಿಚ್ಚಿಯಲ್ಲಿ ಕಳ್ಳಭಟ್ಟಿ ದುರಂತಕ್ಕೆ ಸಂಬಂಧಿಸಿದಂತೆ ಗುರುವಾರ ಚೆನ್ನೈನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು-ಪಿಟಿಐ ಚಿತ್ರ