ನವದೆಹಲಿ: ಇಟಲಿಯಲ್ಲಿ ಜಿ7 ರಾಷ್ಟ್ರಗಳ ಶೃಂಗಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಜಿ-7 ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸತತ ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಪ್ರಧಾನಿ ಮೋದಿ ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸ ಇದಾಗಿದೆ.
ಜಿ7 ಶೃಂಗಸಭೆ ಜೂನ್ 13ರಿಂದ 15ರವರೆಗೆ ನಡೆಯಲಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಗಾಜಾ ಬಿಕ್ಕಟ್ಟು ಸೇರಿ ಜಾಗತಿಕ ಸವಾಲುಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.
ಅಮೆರಿಕದ ಅಧ್ಯಕ್ಷ ಜೋ ಬೈಡನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್, ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರಡೊ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ರಷ್ಯಾ ಆಕ್ರಮಣದ ಕುರಿತು ಅಧಿವೇಶನದಲ್ಲಿ ಮಾತನಾಡುವ ಸಂಭವ ಇದೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ, 'ಮಾತುಕತೆ ಮೂಲಕ ವಿವಾದ ಇತ್ಯರ್ಥಗೊಳಿಸಬೇಕು' ಎಂದು ಹೇಳಿದ್ದಾರೆ.