ಇಸ್ಲಾಮಾಬಾದ್: ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು ಸಜ್ಜಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನೆರೆಯ ಪಾಕಿಸ್ತಾನ, ಮಾತುಕತೆಯ ಮೂಲಕ ವಿವಾದ ಬಗೆಹರಿಸುವುದರೊಂದಿಗೆ ಭಾರತದೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ಬಯಸುತ್ತಿದೆ ಎಂದು ಹೇಳಿದೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಕಚೇರಿಯ ವಕ್ತಾರರಾದ ಮುಮ್ತಾಜ್ ಜಹ್ರಾ ಬಲೋಚ್, 'ಭಾರತದಿಂದ ಎದುರಾಗುವ ತೊಂದರೆಗಳ ಹೊರತಾಗಿಯೂ ಪಾಕಿಸ್ತಾನವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ಹೇಳಿದ್ದಾರೆ.
'ಭಾರತ ಸೇರಿದಂತೆ ತನ್ನ ಎಲ್ಲ ನೆರೆಹೊರೆಯ ರಾಷ್ಟ್ರಗಳೊಂದಿಗೆ ಪಾಕಿಸ್ತಾನ ಯಾವತ್ತೂ ಉತ್ತಮ ಬಾಂಧವ್ಯವನ್ನು ಬಯಸುತ್ತಿದೆ. ಜಮ್ಮು ಮತ್ತು ಕಾಶ್ಮೀರ ಬಿಕ್ಕಟ್ಟು ಸೇರಿದಂತೆ ಎಲ್ಲ ಸಮಸ್ಯೆಗಳನ್ನು ರಚನಾತ್ಮಕ ಮಾತುಕತೆ ಮೂಲಕ ಇತ್ಯರ್ಥಗೊಳಿಸುವುದನ್ನು ಪ್ರತಿಪಾದಿಸಿದ್ದೇವೆ' ಎಂದು ಹೇಳಿದ್ದಾರೆ.
'ಶಾಂತಿಯುತ ಸಹಬಾಳ್ವೆಯಲ್ಲಿ ಪಾಕಿಸ್ತಾನ ನಂಬಿಕೆ ಹೊಂದಿದೆ. ಈ ನಿಟ್ಟಿನಲ್ಲಿ ಮಾತುಕತೆ ಮೂಲಕ ವಿವಾದ ಬಗೆಹರಿಸಲು ಭಾರತ ಉತ್ತಮ ವಾತಾವರಣ ಸೃಷ್ಟಿಸುವ ನಿರೀಕ್ಷೆಯಿದೆ' ಎಂದು ಹೇಳಿದ್ದಾರೆ.