ಮುಂಬೈ: ಬೆಂಚ್‌ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಬುಧವಾರದಂದು ಬಲವಾದ ಪುನರಾಗಮನ ಮಾಡಿವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯದ ಕಾರಣ ಮಂಗಳವಾರದ ವಹಿವಾಟಿನಲ್ಲಿ ಮಹಾಕುಸಿತ ಕಂಡಿದ್ದ ಷೇರು ಪೇಟೆ ಬುಧವಾರ 3 ಪ್ರತಿಶತದಷ್ಟು ಏರಿಕೆಯಾಗಿ ಚೇತರಿಕೆ ಕಂಡಿತು.
ಮಂಗಳವಾರದ ಹಿನ್ನಡೆಯಿಂದ ಪುಟಿದೇಳುವ ಮೂಲಕ, 30-ಷೇರುಗಳ ಬಿಎಸ್‌ಇ ಸೂಚ್ಯಂಕ 2,303.19 ಅಂಕಗಳು ಅಥವಾ 3.20 ರಷ್ಟು ಏರಿಕೆಯಾಯಿತು. ಬ್ಯಾಂಕಿಂಗ್, ಆಟೋ ಮತ್ತು ತೈಲ ಷೇರುಗಳಲ್ಲಿನ ಖರೀದಿಯಿಂದಾಗಿ ಈ ಸೂಚ್ಯಂಕ 74,382.24 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನಲ್ಲಿ, ಇದು 2,455.77 ಅಂಕಗಳು ಅಥವಾ ಶೇಕಡಾ 3.40ರಷ್ಟು ಏರಿಕೆಯಾಗಿ 74,534.82 ಕ್ಕೆ ಮುಟ್ಟಿತ್ತು.
ನಿಫ್ಟಿ 50 ಸೂಚ್ಯಂಕವು 735.85 ಅಂಕಗಳು ಅಥವಾ ಶೇಕಡಾ 3.36 ರಷ್ಟು ಏರಿಕೆಯಾಗಿ 22,620.35 ಕ್ಕೆ ತಲುಪಿತು. ದಿನದ ವಹಿವಾಟಿನಲ್ಲಿ ಇದು 785.9 ಅಂಕಗಳು ಅಥವಾ ಶೇಕಡಾ 3.59 ರಷ್ಟು ಹೆಚ್ಚಳವಾಗಿ 22,670.40 ಕ್ಕೆ ಏರಿತ್ತು.
ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಭಾರೀ ಖರೀದಿಯು ಸೂಚ್ಯಂಕಗಳು ಹೆಚ್ಚಳವಾಗಲು ನೆರವಾಯಿತು.
'ಭಾರತೀಯ ಮಾರುಕಟ್ಟೆಯು ವಿವಿಧ ವಲಯಗಳಾದ್ಯಂತ ವ್ಯಾಪಕ ಖರೀದಿಯಿಂದ ಚೇತರಿಕೆ ಕಂಡಿದೆ. ಏಕೆಂದರೆ, ರಾಜಕೀಯ ಸ್ಥಿರತೆ ಖಚಿತವಾಗಿದೆ. ಆದರೂ, ಸರ್ಕಾರದ ರಚನೆ ಮತ್ತು ಮುಂಬರುವ ಆರ್‌ಬಿಐ ನೀತಿ ಸಭೆಯ ಮೇಲೆ ಗಮನ ಉಳಿಯುತ್ತದೆ' ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
30-ಷೇರುಗಳ ಬಿಎಸ್‌ಇ ಸೂಚ್ಯಂಕದ ಎಲ್ಲ 30 ಕಂಪನಿಗಳ ಷೇರುಗಳ ಬೆಲೆ ಏರಿಕೆ ಕಂಡಿದ್ದು ವಿಶೇಷ. ಇಂಡಸ್‌ಇಂಡ್ ಬ್ಯಾಂಕ್ ಶೇಕಡಾ 7 ರಷ್ಟು ಹೆಚ್ಚಳವಾಯಿತು. ಟಾಟಾ ಸ್ಟೀಲ್, ಮಹೀಂದ್ರಾ ಆಯಂಡ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಕೂಡ ದೊಡ್ಡ ಲಾಭ ಕಂಡವು.
ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್ ಲಾಭ ಕಂಡರೆ, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ದಾಖಲಿಸಿದವು. ಐರೋಪ್ಯ ಮಾರುಕಟ್ಟೆಗಳು ಲಾಭದಲ್ಲಿ ಮುನ್ನಡೆದವು. ಮಂಗಳವಾರ ಅಮೆರಿಕದ ಮಾರುಕಟ್ಟೆಗಳು ಕೂಡ ಸಕಾರಾತ್ಮಕವಾಗಿ ಕೊನೆಗೊಂಡವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 12,436.22 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.
2014ರ ನಂತರ ಬಿಜೆಪಿ ಮೊದಲ ಬಾರಿಗೆ ಬಹುಮತಕ್ಕೆ ಅಗತ್ಯವಿರುವುದಕ್ಕಿಂತ ಕಡಿಮೆ ಸ್ಥಾನ ಗಳಿಸಿದ ಕಾರಣ ಮಂಗಳವಾರ ಮಾರುಕಟ್ಟೆಗಳಲ್ಲಿ ಮಹಾಕುಸಿತ ಕಂಡುಬಂದಿತ್ತು. ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ ಮಂಗಳವಾರ 4,389.73 ಅಂಕಗಳು ಅಥವಾ ಶೇಕಡಾ 5.74ರಷ್ಟು ಕಡಿಮೆಯಾಗಿ 72,079.05 ಕ್ಕೆ ತಲುಪಿತ್ತು. ನಿಫ್ಟಿ 50 ಸೂಚ್ಯಂಕವು 1,379.40 ಅಂಕಗಳು ಅಥವಾ 5.93 ರಷ್ಟು ಕುಸಿದು 21,884.50 ಕ್ಕೆ ಮುಟ್ಟಿತ್ತು.