ಮುಂಬೈ: ಮಾರುಕಟ್ಟೆಯ ಪ್ರಮುಖ ಷೇರುಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಮಹೀಂದ್ರಾ ಆಯಂಡ್ ಮಹೀಂದ್ರಾಗಳಲ್ಲಿ ಖರೀದಿಯ ನಡುವೆ ಶುಕ್ರವಾರದಂದು ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ನಿಫ್ಟಿ ತಮ್ಮ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದವು.
ಸತತ ಮೂರನೇ ವಹಿವಾಟು ದಿನ ಏರಿಕೆ ಕಂಡ 30-ಷೇರುಗಳ ಬಿಎಸ್‌ಇ ಸೂಚ್ಯಂಕ 181.87 ಅಂಕಗಳು ಅಥವಾ ಶೇ. 0.24 ರಷ್ಟು ಏರಿಕೆ ಕಂಡು 76,992.77 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನಲ್ಲಿ ಇದು 270.4 ಅಂಕಗಳು ಅಥವಾ ಶೇ. 0.35 ಜಿಗಿದು 77,081.30 ಕ್ಕೆ ತಲುಪಿತ್ತು.
ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 66.70 ಅಂಕಗಳು ಅಥವಾ ಶೇ. 0.29ರಷ್ಟು ಏರಿಕೆ ಕಂಡು 23,465.60 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. ಇಂಟ್ರಾ-ಡೇ ವಹಿವಾಟಿನಲ್ಲಿ ಇದು 91.5 ಅಂಕಗಳು ಅಥವಾ ಶೇಕಡಾ 0.39 ರಷ್ಟು ಏರಿಕೆಯಾಗಿ 23,490.40ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತ್ತು.
ಕಳೆದ ಒಂದು ವಾರದಲ್ಲಿ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 299.41 ಅಂಕಗಳು ಅಥವಾ ಶೇಕಡಾ 0.39 ರಷ್ಟು ಏರಿದರೆ, ನಿಫ್ಟಿ ಸೂಚ್ಯಂಕ 175.45 ಅಂಕಗಳು ಅಥವಾ ಶೇಕಡಾ 0.75 ರಷ್ಟು ಹೆಚ್ಚಳ ಕಂಡಿದೆ.
ಶುಕ್ರವಾರದ ವಹಿವಾಟಿನಲ್ಲಿ ಮಹೀಂದ್ರಾ ಆಯಂಡ್ ಮಹೀಂದ್ರಾ, ಟೈಟಾನ್, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಟಾಟಾ ಮೋಟಾರ್ಸ್ ಮತ್ತು ಏಷ್ಯನ್ ಪೇಂಟ್ಸ್ ಷೇರುಗಳು ಹೆಚ್ಚು ಲಾಭ ಗಳಿಸಿದವು. ಟೆಕ್ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ವಿಪ್ರೋ, ಎಚ್‌ಸಿಎಲ್ ಟೆಕ್ನಾಲಜೀಸ್, ಲಾರ್ಸನ್ ಆಯಂಡ್ ಟೂಬ್ರೊ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಹಿನ್ನಡೆ ಕಂಡವು.
ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ. 1.18 ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ. 1.03 ರಷ್ಟು ಏರಿಕೆ ಕಂಡಿತು. ವಲಯವಾರು ಸೂಚ್ಯಂಕಗಳ ಪೈಕಿ, ಕೈಗಾರಿಕೆಗಳು ಶೇ.1.68, ಬಂಡವಾಳ ಸರಕುಗಳು (ಶೇ. 1.62), ದೂರಸಂಪರ್ಕ (ಶೇ. 1.31), ಆಟೋ (ಶೇ. 1.26), ಗ್ರಾಹಕ ವಿವೇಚನೆ (ಶೇ. 1.15) ಮತ್ತು ರಿಯಾಲ್ಟಿ (ಶೇ. 0.94) ಏರಿಕೆ ಕಂಡರೆ, ಐಟಿ ಮತ್ತು ಟೆಕ್ ವಲಯದ ಷೇರುಗಳು ನಷ್ಟ ಅನುಭವಿಸಿದವು.
ಏಷ್ಯಾದ ಮಾರುಕಟ್ಟೆಗಳ ಪೈಕಿ ಸಿಯೋಲ್, ಟೋಕಿಯೊ ಮತ್ತು ಶಾಂಘೈ ಲಾಭ ಕಂಡರೆ, ಹಾಂಗ್ ಕಾಂಗ್ ಕುಸಿತ ದಾಖಲಿಸಿತು. ಐರೋಪ್ಯ ಮಾರುಕಟ್ಟೆಗಳಲ್ಲಿ ಕಡಿಮೆ ವಹಿವಾಟು ನಡೆಯಿತು. ಅಮೆರಿಕದ ಮಾರುಕಟ್ಟೆಗಳಲ್ಲಿ ಗುರುವಾರ ಮಿಶ್ರ ನೋಟ ಇತ್ತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 3,033 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.
ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ ಗುರುವಾರ 204.33 ಅಂಕಗಳು ಅಥವಾ 0.27ರಷ್ಟು ಏರಿಕೆಯಾಗಿ 76,810.90 ಕ್ಕೆ ಕೊನೆಗೊಂಡಿತ್ತು. ನಿಫ್ಟಿ ಸೂಚ್ಯಂಕವು 75.95 ಅಂಕಗಳು ಅಥವಾ 0.33 ರಷ್ಟು ಏರಿಕೆ ಕಂಡು 23,398.90 ಕ್ಕೆ ಸ್ಥಿರವಾಗಿತ್ತು.