ಲಂಡನ್: ಲೋಹ ಪತ್ತೆ ಮಾಡುವ ವ್ಯಕ್ತಿಯೊಬ್ಬರ ಕಾಳಜಿಯಿಂದಾಗಿ 50 ವರ್ಷಗಳ ಹಿಂದೆ ಕಳೆದುಹೋಗಿದ್ದ ರೋಲೆಕ್ಸ್ ಕೈಗಡಿಯಾರವೊಂದು ಸಿಕ್ಕಿದೆ.
ಆಸ್ವೆಸ್ಟ್ರಿಯಲ್ಲಿನ ಮೊರ್ದಾ ಬಳಿಯ ಟ್ರೆಫ್‌ಲ್ಯಾಚ್ ಹಾಲ್ ಮಾಲೀಕರೂ ಆದ ಬ್ರಿಟಿಷ್ ರೈತ ಸ್ಟೀಲ್ ಎಂಬುವವರಿಗೆ ಸೇರಿದ ಕೈಗಡಿಯಾರವಿದು.
ಅವರದ್ದೇ ಜಮೀನಿನಲ್ಲಿ ಲೋಹ ಪತ್ತೆ ಮಾಡುವ ಯಂತ್ರವನ್ನು ಬಳಸಿ ವ್ಯಕ್ತಿಯೊಬ್ಬರು ಹುಡುಕಾಟ ನಡೆಸಿದ್ದಾಗ ಕೈಗಡಿಯಾರ ಸಿಕ್ಕಿತು. ಇನ್ನಷ್ಟು ವಸ್ತುಗಳು ಸಿಗುವ ಸಾಧ್ಯತೆ ಇರುವುದರಿಂದ ಹುಡುಕಾಟ ಮುಂದುವರಿಸುವಂತೆ ಲೋಹ ಪತ್ತೆ ಮಾಡುವ ವ್ಯಕ್ತಿಗೆ ಜಮೀನಿನ ಮಾಲೀಕರು ಸೂಚಿಸಿದ್ದಾರೆ.
1970ರಲ್ಲಿ ಕೈಗಡಿಯಾರದ ಬ್ರೇಸ್‌ಲೆಟ್ ತುಂಡಾಗಿ ಬಿದ್ದಿತ್ತು. 'ಅದು ಬಹುಮಾನವಾಗಿ ಬಂದಿದ್ದ ಕೈಗಡಿಯಾರ. ನಾನೆಲ್ಲೋ ಹಸುವು ಮೇವಿನೊಟ್ಟಿಗೆ ಕೈಗಡಿಯಾರವನ್ನೂ ನುಂಗಿಬಿಟ್ಟಿತ್ತು ಎಂದುಕೊಂಡಿದ್ದೆ' ಎಂದು ಸ್ಟೀಲ್ ಹೇಳಿದ್ದಾಗಿ ಬಿಬಿಸಿ ವರದಿ ಮಾಡಿದೆ. 92 ವರ್ಷ ವಯಸ್ಸಿನ ಸ್ಟೀಲ್ ಅವರಿಗೆ ತಮ್ಮ ಕೈಗಡಿಯಾರ 50 ವರ್ಷಗಳ ನಂತರ ದೊರೆತಿರುವುದು ಪವಾಡ ಎಂದೆನಿಸಿದೆ. ಅದೃಷ್ಟವಶಾತ್ ಅದು ಸಿಕ್ಕಿದೆ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.
ಕೈಗಡಿಯಾರವು ಹಸಿರು ಬಣ್ಣಕ್ಕೆ ತಿರುಗಿದೆ. ಮುಳ್ಳುಗಳು ಚಲಿಸುತ್ತಿಲ್ಲ. ಅದನ್ನು ರಿಪೇರಿ ಮಾಡಿಸಲು ಹೊರಟರೆ ದೊಡ್ಡ ಮೊತ್ತವನ್ನು ವ್ಯಯಿಸಬೇಕು ಎನ್ನುವ ಅವರು, ನೆನಪಿಗೆ ಅದನ್ನು ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ.