ರಿಯಾದ್: 'ಸೌದಿ ಅರೇಬಿಯಾದಲ್ಲಿ ಬಿಸಿ ಗಾಳಿ ಬೀಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಮೆಕ್ಕಾ ಯಾತ್ರೆಗೆ ತೆರಳಿದ್ದ ಈಜಿಪ್ಟ್ ಸೇರಿದಂತೆ ವಿವಿಧ ರಾಷ್ಟ್ರಗಳ ಸುಮಾರು 550 ಯಾತ್ರಿಗಳು ಮೃತಪಟ್ಟಿದ್ದಾರೆ' ಎಂದು ವರದಿಯಾಗಿದೆ.
ಮೆಕ್ಕಾ ಸುತ್ತಮುತ್ತಲಿನ ತಾಪಮಾನ 51.8 ಡಿಗ್ರಿ ಸೆಲ್ಸಿಯಸ್ ಇದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 0.4 ಡಿಗ್ರಿಯಷ್ಟು ಹೆಚ್ಚು. ಮೃತಪಟ್ಟ ತನ್ನ ದೇಶದ ನಾಗರಿಕರ ಪತ್ತೆಗೆ ಸೌದಿ ಅಧಿಕಾರಿಗಳೊಂದಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಈಜಿಪ್ಟ್‌ನ ವಿದೇಶಾಂಗ ಸಚಿವ ಹೇಳಿದ್ದಾರೆ.
ಶಾಖಾಘಾತದಿಂದ ಬಳಲುತ್ತಿರುವ ಸುಮಾರು ಎರಡು ಸಾವಿರ ಯಾತ್ರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೌಧಿ ಅಧಿಕಾರಿಗಳು ತಿಳಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ವಾರ್ಷಿಕ ಹಜ್ ಯಾತ್ರೆಯಲ್ಲಿ ಪಾಲ್ಗೊಂಡವರು ಬಿಸಿಲ ತಾಪದಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದು ಸಾಗಿದರು
ಕಳೆದ ವರ್ಷದ ವಿವಿಧ ಕಾರಣಗಳಿಂದ 240 ಯಾತ್ರಿಗಳು ಮೆಕ್ಕಾದಲ್ಲಿ ಮೃತಪಟ್ಟಿದ್ದರು. ಇವರಲ್ಲಿ ಬಹುತೇಕರು ಇಂಡೊನೇಷ್ಯಾದವರಾಗಿದ್ದರು ಎಂದು ವರದಿಯಾಗಿದೆ.
ಶಾಖಾಘಾತದಿಂದ ಪಾರಾಗಲು ಯಾತ್ರಿಗಳು ತಲೆ ಮೇಲೆ ನೀರು ಹಾಕಿಕೊಳ್ಳುತ್ತಿದ್ದಾರೆ. ತಂಪು ಪಾನೀಯ, ಕ್ರೀಂ ಹಾಗೂ ಚಾಕೊಲೇಟ್‌ಗಳನ್ನು ಸೇವಿಸುತ್ತಿದ್ದಾರೆ. ಛತ್ರಿಯನ್ನು ಬಳಸಲು, ಯಥೇಚ್ಚ ನೀರು ಕುಡಿಯುವಂತೆ ಹಾಗೂ ಸೂರ್ಯನ ಬಿಸಿಲಿಗೆ ನೇರವಾಗಿ ಹೋಗದಂತೆ ಅಲ್ಲಿನ ಅಧಿಕಾರಿಗಳು ಯಾತ್ರಿಗಳಿಗೆ ಸೂಚನೆ ನೀಡಿದ್ದಾರೆ.
ಪವಿತ್ರ ಕ್ಷೇತ್ರದ ರಸ್ತೆಗಳಲ್ಲಿ ಮೃತದೇಹಗಳು ಕಾಣಿಸುತ್ತಿವೆ. ಆಂಬುಲೆನ್ಸ್‌ಗಳು ಬಿಡುವಿಲ್ಲದೆ ಓಡಾಡುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಈ ಬಾರಿ 18 ಲಕ್ಷ ಜನ ಹಜ್ ಯಾತ್ರೆ ಕೈಗೊಂಡಿದ್ದಾರೆ. ಇವರಲ್ಲಿ 16 ಲಕ್ಷ ಜನ ವಿದೇಶದವರಾಗಿದ್ದಾರೆ ಎಂದು ಸೌಧಿ ಆಡಳಿತ ಹೇಳಿದೆ.