ನವದೆಹಲಿ: ಪೂರ್ವ ಲಡಾಖ್ ಗಡಿಗೆ ಸಂಬಂಧಿಸಿ ಭಾರತ-ಚೀನಾ ನಡುವಿನ ಸಂಘರ್ಷ ಮುಂದುವರಿದಿರುವ ನಡುವೆಯೇ, ಸಿಕ್ಕಿಂಗೆ ಹತ್ತಿರದ ತನ್ನ ಗಡಿಯಲ್ಲಿ ಚೀನಾ ಅತ್ಯಾಧುನಿಕ 6 ಜೆ-20 ಯುದ್ಧವಿಮಾನಗಳನ್ನು ನಿಯೋಜನೆ ಮಾಡಿದೆ.
ಸಿಕ್ಕಿಂಗೆ ಹೊಂದಿಕೊಂಡ ಗಡಿಗೆ ಸಮೀಪವಿರುವ ಶಿಗಟ್ಸೆ ವಾಯುನೆಲೆಯಲ್ಲಿ ಚೀನಾ ಈ ಯುದ್ಧವಿಮಾನಗಳನ್ನು ನಿಯೋಜನೆ ಮಾಡಿದ್ದು, ಭಾರತೀಯ ರಕ್ಷಣಾ ಪಡೆಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇವುಗಳ ಜೊತೆಗೆ, 8 ಜೆ-10 ಯುದ್ಧವಿಮಾನಗಳು, ವೈಮಾನಿಕ ದಾಳಿ ಕುರಿತು ಸಾಕಷ್ಟು ಮುಂಚಿತವಾಗಿ ಎಚ್ಚರಿಕೆ ನೀಡಬಲ್ಲ ಕೆಜೆ-500 ವಿಮಾನವನ್ನು ಗಡಿಯಲ್ಲಿ ನಿಯೋಜನೆ ಮಾಡಿರುವುದು ಉಪಗ್ರಹ ಸೆರೆಹಿಡಿದ ಚಿತ್ರದಲ್ಲಿ ಕಾಣಿಸುತ್ತದೆ ಎಂದು 'ಆಲ್ ಸೋರ್ಸ್ ಅನಲಿಸಿಸ್' ಎಂಬ ಗುಪ್ತಚರ ಸಂಸ್ಥೆ ತಿಳಿಸಿದೆ. ಈ ಚಿತ್ರವನ್ನು ಸಂಸ್ಥೆಯೇ ಬಿಡುಗಡೆ ಮಾಡಿದೆ.
ರೇಡಾರ್ ಸೇರಿದಂತೆ ಇತರ ವ್ಯವಸ್ಥೆಗಳು ಪತ್ತೆ ಮಾಡುವುದನ್ನು ತಡೆಯಲು ಅಗತ್ಯವಿರುವ ತಂತ್ರಜ್ಞಾನದಿಂದ ಈ ಜೆ-20 ಯುದ್ಧವಿಮಾನಗಳನ್ನು ವಿನ್ಯಾಸಗೊಳಿಸಲಾಗಿದೆ.
12 ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಶಿಗಟ್ಸೆ, ಟಿಬೆಟ್‌ನ ಎರಡನೇ ದೊಡ್ಡ ನಗರವಾಗಿದೆ. ಇಲ್ಲಿರುವ ವಿಮಾನ ನಿಲ್ದಾಣವನ್ನು ನಾಗರಿಕ ವಿಮಾನಯಾನ ಹಾಗೂ ಸೇನೆಯ ಕಾರ್ಯಾಚರಣೆಗೂ ಬಳಸಬಹುದಾಗಿದೆ.
ಚೀನಾ, ಟಿಬೆಟ್‌ನ ಪೂರ್ವಭಾಗದಲ್ಲಿ ರಸ್ತೆ ಹಾಗೂ ರೈಲ್ವೆ ಮೂಲಸೌಕರ್ಯಗಳ ಅಭಿವೃದ್ಧಿಗೂ ಒತ್ತು ನೀಡುತ್ತಿದೆ. ಈ ಭಾಗವು ಭಾರತ ಹಾಗೂ ಭೂತಾನ್ ಸನಿಹದಲ್ಲಿದೆ.
ಚೀನಾದ ಈ ನಡೆ ಕುರಿತು ಭಾರತೀಯ ವಾಯುಪಡೆ ಹಾಗೂ ರಕ್ಷಣಾ ಸಚಿವಾಲಯ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಚೀನಾ ಸರ್ಕಾರದಿಂದಲೂ ಪ್ರತಿಕ್ರಿಯೆ ಇಲ್ಲ.
ಆದರೆ, ಎತ್ತರ ಪ್ರದೇಶಗಳಲ್ಲಿ ಕೈಗೊಳ್ಳುವ ತರಬೇತಿಗಾಗಿ ಈ ಯುದ್ಧವಿಮಾನಗಳನ್ನು ನಿಯೋಜನೆ ಮಾಡಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.