ತಿರುವನಂತಪುರಂ: ಕಳೆದ ಆರು ತಿಂಗಳಲ್ಲಿ ಆನ್‍ಲೈನ್ ವಂಚನೆಯಲ್ಲಿ ಕೇರಳೀಯರು 617.59 ಕೋಟಿ ರೂ.ಕಳಕೊಂಡಿದ್ದಾರೆ. ಈ ಪೈಕಿ ಕೇವಲ 9.67 ಕೋಟಿ ರೂ.ಮಾತ್ರ ಮರಳಿ ಲಭಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಧಾನಸಭೆಯಲ್ಲಿ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಇದು ಕಳೆದ ಡಿಸೆಂಬರ್‍ನಿಂದ ಮೇ ತಿಂಗಳವರೆಗಿನ ಅಂಕಿ ಅಂಶ.
ವೃತ್ತಿಪರರು ಹೆಚ್ಚಾಗಿ ಸಿಕ್ಕಿಬಿದ್ದಿದ್ದಾರೆ. ಮುಖ್ಯವಾಗಿ ಮೊಬೈಲ್ ಪೋನ್‍ಗೆ ಬರುವ ಒಟಿಪಿ ಮೂಲಕ ಹಣ ಸುಲಿಗೆ ಮಾಡಲಾಗುತ್ತಿತ್ತು. ಇದಲ್ಲದೇ ಇನ್‍ಸ್ಟಾಗ್ರಾಂ, ಫೇಸ್‍ಬುಕ್‍ಗಳನ್ನೂ ವಂಚಕರು ಬಳಸುತ್ತಿದ್ದಾರೆ. ಸಾಲದ ಆ್ಯಪ್‍ಗಳು, ಆನ್‍ಲೈನ್ ಗೇಮ್‍ಗಳು, ಸಿಬಿಐ ಬೆದರಿಕೆಗಳು ಮತ್ತು ಇತರ ವಿಧಾನಗಳನ್ನು ಕೇರಳೀಯರನ್ನು ಸೆಳೆಯಲು ಬಳಸಲಾಗುತ್ತಿತ್ತು. ಉನ್ನತ ಮಟ್ಟದ ಅಧಿಕಾರಿಗಳೂ ವಂಚನೆಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಕೇರಳೀಯರು ಹೆಚ್ಚಾಗಿ ಉತ್ತರ ಭಾರತದ ವಂಚಕ ತಂಡದ ಬಲೆಗೆ ಬಿದ್ದಿದ್ದಾರೆ. ಹೀಗಾಗಿ ತನಿಖೆಯೂ ಸೀಮಿತವಾಗಿದೆ.