ಪಾಟ್ನಾ: ಮಹತ್ವದ ಬೆಳವಣಿಗೆಯೊಂದರಲ್ಲಿ, ಪಾಟ್ನಾ ಹೈಕೋರ್ಟ್ ಗುರುವಾರ ಬಿಹಾರ ಮೀಸಲಾತಿ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ) (ತಿದ್ದುಪಡಿ) ಕಾಯಿದೆ, 2023 ಮತ್ತು ಬಿಹಾರ (ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ) ಮೀಸಲಾತಿ (ತಿದ್ದುಪಡಿ) ಕಾಯ್ದೆ 2023ರ ಅಡಿಯಲ್ಲಿ ಮೀಸಲಾತಿ ಕೋಟಾವನ್ನು ಈಗಿರುವ ಶೇಕಡಾ 65ರಿಂದ ಶೇಕಡಾ 50ಕ್ಕೆ ಇಳಿಕೆ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಹರೀಶ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಬಿಹಾರ ಸರ್ಕಾರ ಶೇಕಡಾ 65ರಷ್ಟು ಮೀಸಲಾತಿ ಕಲ್ಪಿಸಿ ಬಿಹಾರ ವಿಧಾನಸಭೆಯಲ್ಲಿ ಅಂಗೀಕರಿಸಿದ ತಿದ್ದುಪಡಿಯನ್ನು ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಪರಿಗಣಿಸಿದೆ.
ಇದರ ಜೊತೆಗೆ, ಸರ್ಕಾರ ಶೇಕಡಾ 10ರಷ್ಟು ಸೀಟುಗಳನ್ನು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಮೀಸಲಿಟ್ಟಿತ್ತು. ಒಟ್ಟಾರೆಯಾಗಿ ತೆಗೆದುಕೊಂಡರೆ, ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ 75ರಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಒಬಿಸಿ, ಇಡಬ್ಲ್ಯುಎಸ್ ಗಳಿಗೆ ಮೀಸಲಿಡಲಾಗಿತ್ತು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಹಾರ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, ಮೀಸಲಾತಿಯಿಲ್ಲದ ವರ್ಗಕ್ಕೆ ಕೇವಲ ಶೇಕಡಾ 25ರಷ್ಟು ಸೀಟುಗಳು ಮಾತ್ರ ತೆರೆದಿವೆ.
ಹೈಕೋರ್ಟ್ ಆದೇಶವು ಆಡಳಿತಾರೂಢ ಎನ್‌ಡಿಎ ಹಾಗೂ ಪ್ರತಿಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡುವುದರ ಜೊತೆಗೆ ಮೀಸಲಾತಿ ಕೋಟಾವನ್ನು ಶೇಕಡಾ 50ರಿಂದ ಶೇಕಡಾ 65ಕ್ಕೆ ಹೆಚ್ಚಿಸಲು ಒತ್ತಾಯಿಸಿದ್ದವು.