ಜಬಲ್ಪುರ: 70 ವರ್ಷದ ಮಹಿಳೆಯೊಬ್ಬರು ಮೊಮ್ಮಗನಿಗೆ ಕಿಡ್ನಿ ದಾನ ಮಾಡಿ ಆತನ ಜೀವ ಉಳಿಸಿದ್ದಾರೆ.
23ರ ಹರೆಯದ ಮೊಮ್ಮಗನ ಕಿಡ್ನಿ ಹಾಳಾಗಿದೆ ಎಂದು ವೈದ್ಯರು ಹೇಳಿದಾಗ ವೃದ್ಧೆಯ ಮನಸ್ಸು ಮರುಗಿದ್ದು, ಆ ವಯಸ್ಸಿನಲ್ಲೂ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮೊಮ್ಮಗನಿಗೆ ಕಿಡ್ನಿ ಕೊಟ್ಟಿದ್ದಾಳೆ.
ಜಬಲ್‌ಪುರದ ಸಿಹೋರಾ ಮೂಲದ 23 ವರ್ಷದ ಯುವಕ ಕೆಲ ದಿನಗಳಿಂದ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಆತನ ಎರಡೂ ಕಿಡ್ನಿಗಳು ಸಂಪೂರ್ಣ ಹಾಳಾಗಿದ್ದವು. ಇದರಿಂದಾಗಿ ಆತ ಆಗಾಗ್ಗೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ. ಎಷ್ಟು ಬಾರಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಯುವಕನಿಗೆ ಕಿಡ್ನಿ ಕಸಿ ಮಾಡುವುದು ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದಾರೆ. ಅದರೊಂದಿಗೆ ಯುವಕನ ಕುಟುಂಬಸ್ಥರು ಆತನಿಗೆ ಸೂಕ್ತ ಕಿಡ್ನಿಗಾಗಿ ಹುಡುಕಾಟ ಆರಂಭಿಸಿದ್ದರು.
ರಕ್ತಪರೀಕ್ಷೆಯಲ್ಲಿ ಯುವಕ ಹಾಗೂ ಅಜ್ಜಿಯ ರಕ್ತದ ಗುಂಪು ಒಂದೇ ಆಗಿರುವುದು ಕಂಡುಬಂದಿದೆ. ಅಲ್ಲದೆ ವೈದ್ಯರು ಇಬ್ಬರಿಗೂ ರಕ್ತ ಹಾಗೂ ಇತರೆ ಪರೀಕ್ಷೆಗಳನ್ನು ಮಾಡಿದರು. ಇದರೊಂದಿಗೆ ಅಜ್ಜಿಯ ಆರೋಗ್ಯ ತಪಾಸಣೆ ಮಾಡಲಾಯಿತು. ಅದೇ ವೇಳೆಗೆ ಅಜ್ಜಿಯ ಕಿಡ್ನಿ ಯುವಕನಿಗೆ ಹೊಂದಾಣಿಕೆಯಾಯಿತು. ನಂತರ ಜಬಲ್‌ಪುರ ಮೆಟ್ರೋ ಆಸ್ಪತ್ರೆಯ ವೈದ್ಯರಾದ ವಿಶಾಲ್ ಬಡೇರಾ ಮತ್ತು ರಾಜೇಶ್ ಪಟೇಲ್ ಅವರು ಶಸ್ತ್ರಚಿಕಿತ್ಸೆ ನಡೆಸಿ ಅಜ್ಜಿಯ ಕಿಡ್ನಿಯನ್ನು ಮೊಮ್ಮಗನಿಗೆ ಕಸಿ ಮಾಡಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮೊಮ್ಮಗ ಮತ್ತು ಅಜ್ಜಿ ಇಬ್ಬರೂ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಿಡ್ನಿ ಕಸಿ ಮಾಡುವುದು ಸಾಮಾನ್ಯವಾದರೂ ಅಜ್ಜಿ ಇಳಿವಯಸ್ಸಿನಲ್ಲಿ ತನ್ನ ಕಿಡ್ನಿಯನ್ನು ಜೀವವನ್ನೇ ಪಣಕ್ಕಿಟ್ಟು ದಾನ ಮಾಡಿರುವುದು ಗಮನಾರ್ಹ. ವಯಸ್ಸಾದ ಮಹಿಳೆಯ ದೇಹದಿಂದ ಮೂತ್ರಪಿಂಡವನ್ನು ತೆಗೆದುಹಾಕುವುದು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಅದರೊಂದಿಗೆ ವೈದ್ಯರು ಒಂದು ತಿಂಗಳು ಅಜ್ಜಿಯ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಿದರು. ಬಳಿಕ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.