ಮುಂಬೈ: ಗುರುವಾರ ಭಾರತೀಯ ಷೇರುಮಾರುಕಟ್ಟೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಸೆನ್ಸೆಕ್ಸ್ 79 ಸಾವಿರ ಗಡಿದಾಟಿದರೆ, ನಿಫ್ಟಿ ಕೂಡ 24 ಸಾವಿರ ಗಡಿ ದಾಟಿದೆ.
ಬಾಂಬೆ ಷೇರು ಪೇಟೆಯಲ್ಲಿ ಗೂಳಿ ನೆಗೆತ ಮುಂದುವರಿದಿದ್ದು, ಬುಧವಾರ 78,053.52 ಅಂಕಗಳ ದಾಖಲೆಯ ಮಟ್ಟಕ್ಕೆ ತಲುಪಿದ್ದ ಸೆನ್ಸೆಕ್ಸ್ ಇಂದು ಕೂಡ ಮೇಲ್ಮುಖವಾಗಿ ಸಾಗಿ 79 ಸಾವಿರ ಗಡಿದಾಟಿದೆ. ವಹಿವಾಟು ಆರಂಭದಲ್ಲಿ ಕುಸಿತ ದಾಖಲಿಸಿದ ನಂತರ ಸೆನ್ಸೆಕ್ಸ್ ಚೇತರಿಸಿಕೊಂಡಿದ್ದು, ಮೊದಲ ಬಾರಿಗೆ ಐತಿಹಾಸಿಕ 79,000 ಅಂಕ ಮುಟ್ಟಿದೆ. ನಿಫ್ಟಿ (23,966.40) ಕೂಡ ಹೊಸ ದಾಖಲೆ ಬರೆದಿದೆ.
ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಬ್ಲೂ-ಚಿಪ್ ಮತ್ತು ಐಸಿಐಸಿಐಯ ಷೇರು ಖರೀದಿಯೊಂದಿಗೆ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 339.51 ಪಾಯಿಂಟ್ಸ್ ಏರಿಕೆ ಕಂಡು 79,013.76ಕ್ಕೆ ತಲುಪಿದೆ.
ಅದೇ ರೀತಿ ನಿಫ್ಟಿ ಕೂಡ 97.6 ಪಾಯಿಂಟ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 24 ಸಾವಿರ ಗಡಿ ದಾಟಿದೆ. ಇಂದಿನ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್ 568.93 ಅಂಕಗಳ ಸೇರ್ಪಡೆಯೊಂದಿಗೆ 79,243.18 ಅಂಕಗಳಿಗೆ ಏರಿಕೆಯಾದರೆ, ನಿಫ್ಟಿ 175.70 ಅಂಕಗಳ ಸೇರ್ಪಡೆಯೊಂದಿಗೆ 24,044.50 ಅಂಕಗಳಿಗೆ ಏರಿಕೆಯಾಗಿದೆ.
ಅಲ್ಟ್ರಾಟೆಕ್ ಸಿಮೆಂಟ್, ಜೆಎಸ್ ಡಬ್ಲ್ಯು ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಅತಿ ಹೆಚ್ಚು ಲಾಭ ಗಳಿಸಿದರೆ, ಮಾರುತಿ, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಲಾರ್ಸನ್ & ಟೂಬ್ರೊ ಅತಿ ಹೆಚ್ಚು ನಷ್ಟ ಅನುಭವಿಸಿದವು.
80 ಸಾವಿರ ಗಡಿಯತ್ತ ಸೆನ್ಸೆಕ್ಸ್
ತಜ್ಞರ ಅಭಿಪ್ರಾಯದಂತೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಸೆನ್ಸೆಕ್ಸ್ ಅನ್ನು 80,000 ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ. ಏಷ್ಯಾದ ಮಾರುಕಟ್ಟೆಗಳ ಪೈಕಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ವಹಿವಾಟು ಕೆಳ ಮಟ್ಟದಲ್ಲಿದೆ. ಅಮೆರಿಕ ಮಾರುಕಟ್ಟೆ ಕೂಡ ಬುಧವಾರ ಧನಾತ್ಮಕ ಅಂಶದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದು ಭಾರತೀಯ ಷೇರುಮಾರುಕಟ್ಟೆದೆ ಆಶಾದಾಯಕ ಅಂಶವಾಗಿದೆ ಎಂದು ಹೇಳಲಾಗಿದೆ.