ರೋಮ್ : ಇಟಲಿಯಲ್ಲಿ ಶನಿವಾರ ಮುಕ್ತಾಯಗೊಂಡ ಮೂರು ದಿನಗಳ ಜಿ7 ಶೃಂಗಸಭೆಯ ನಿರ್ಣಯದಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ)ಯಂತಹ ನಿರ್ಧಿಷ್ಟ ಮೂಲಸೌಕರ್ಯ ಯೋಜನೆಗಳಿಗೆ ಜಿ7 ಸದಸ್ಯರು ಬೆಂಬಲಿಸುವುದಾಗಿ ಪ್ರತಿಜ್ಞೆ ಮಾಡಲಾಗಿದೆ.
ಅಂತರರಾಷ್ಟ್ರೀಯ ಕಾನೂನಿನಿಂದ ನಿಯಂತ್ರಿಸಲ್ಪಡುವ ಮುಕ್ತ ಮತ್ತು ಸ್ವತಂತ್ರ ಇಂಡೊ-ಪೆಸಿಫಿಕ್‍ಗೆ ತಮ್ಮ ಬದ್ಧತೆಯನ್ನು ಜಿ7 ದೇಶಗಳ ಮುಖಂಡರು ಪುನರುಚ್ಚರಿಸಿದ್ದಾರೆ.
ಬೊರ್ಗೊ ಎಗಾಂಝಿಯಾ ರೆಸಾರ್ಟ್‍ನಲ್ಲಿ ಸಾಂಪ್ರದಾಯಿಕ ಗ್ರೂಫ್ ಫೋಟೋ ಕಾರ್ಯಕ್ರಮದ ಬಳಿಕ ಈ ಹೇಳಿಕೆ ಬಿಡುಗಡೆಗೊಳಿಸಲಾಗಿದೆ. ಶೃಂಗಸಭೆಯನ್ನು ಆಯೋಜಿಸಿದ್ದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.
ಜಿ7 ಪಿಜಿಐಐಗೆ (ಜಾಗತಿಕ ಮೂಲಸೌಕರ್ಯ ಮತ್ತು ಹೂಡಿಕೆಗಾಗಿ ಸಹಭಾಗಿತ್ವ), ಗುಣಮಟ್ಟದ ಮೂಲಸೌಕರ್ಯ ಮತ್ತು ಹೂಡಿಕೆಗಾಗಿ ಆರ್ಥಿಕ ಕಾರಿಡಾರ್‍ಗಳನ್ನು ಅಭಿವೃದ್ಧಿಪಡಿಸಲು ಪ್ರಮುಖ ಯೋಜನೆಗಳು ಮತ್ತು ಪೂರಕ ಉಪಕ್ರಮಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಲೊಬಿಟೊ ಕಾರಿಡಾರ್, ಲುಝಾನ್ ಕಾರಿಡಾರ್, ಮಿಡ್ಲ್ ಕಾರಿಡಾರ್, ಭಾರತ- ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‍ನಂತಹ ಗುಣಮಟ್ಟದ ಯೋಜನೆಗಳಿಗೆ ನಮ್ಮ ಸಮನ್ವಯ ಮತ್ತು ಹಣಕಾಸು ನೆರವನ್ನು ಹೆಚ್ಚಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.
ನೂತನ ಪರಿಕಲ್ಪನೆಯೆಂದು ಬಣ್ಣಿಸಲಾಗಿರುವ ಐಎಂಇಸಿಯು ಸೌದಿ ಅರೆಬಿಯಾ- ಭಾರತ- ಅಮೆರಿಕ ಮತ್ತು ಯುರೋಪ್ ಅನ್ನು ಸಂಪರ್ಕಿಸಲು ರಸ್ತೆ, ರೈಲ್ವೇ ಹಾಗೂ ನೌಕಾ ಮಾರ್ಗಗಳ ಸಮಗ್ರ ಜಾಲವನ್ನು ನಿರ್ಮಿಸುವ ಯೋಜನೆಯಾಗಿದೆ. ಈ ಉಪಕ್ರಮವು ಏಶ್ಯಾ, ಮಧ್ಯಪ್ರಾಚ್ಯ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವೆ ಸಂಯೋಜನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಚೀನಾದ ಬೆಲ್ಟ್ ಆಯಂಡ್ ರೋಡ್ ಉಪಕ್ರಮ(ಬಿಆರ್‍ಐ)ಕ್ಕೆ ಪ್ರತಿಯಾಗಿ ತಮ್ಮ ಕಾರ್ಯತಂತ್ರದ ಪ್ರಭಾವವನ್ನು ಹೆಚ್ಚಿಸಲು ಮಿತ್ರರಾಷ್ಟ್ರಗಳ ಪ್ರಯತ್ನವೆಂದು ಐಎಂಇಸಿಯನ್ನು ಪರಿಗಣಿಸಲಾಗಿದೆ. ಕಳೆದ ವರ್ಷ ದಿಲ್ಲಿಯಲ್ಲಿ ನಡೆದಿದ್ದ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಐಎಂಇಸಿ ಯೋಜನೆಯ ಚೌಕಟ್ಟನ್ನು ಅಂತಿಮಗೊಳಿಸಲಾಗಿತ್ತು.
ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಪೋಪ್ ಫ್ರಾನ್ಸಿಸ್ ಇತಿಹಾಸ ಸೃಷ್ಟಿಸಿದರು. ಅಮೆರಿಕ ಪ್ರಧಾನಿ ಜೋ ಬೈಡನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ, ಬ್ರಿಟನ್ ಪ್ರಧಾನಿ ರಿಷಿ ಸುನಾಕ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್, ಜರ್ಮನ್ ಛಾನ್ಸಲರ್ ಒಲಾಫ್ ಶ್ಹಾಲ್ಝ್, ಜಪಾನ್ ಪ್ರಧಾನಿ ಫುಮಿಯೊ ಕಿಷಿಡಾ, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾಲ್ರ್ಸ್ ಮಿಚೆಲ್ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್‍ಡರ್ ಲಿಯೆನ್ ಶೃಂಗಸಭೆಯಲ್ಲಿ ಪಾಲ್ಗೊಂಡರು. ಪ್ರಧಾನಿ ಮೋದಿ ಶುಕ್ರವಾರ `ಕೃತಕ ಬುದ್ಧಿಮತ್ತೆ, ಇಂಧನ, ಆಫ್ರಿಕಾ ಮತ್ತು ಮೆಡಿಟರೇನಿಯನ್' ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಶೃಂಗಸಭೆಯ ನೇಪಥ್ಯದಲ್ಲಿ ಮೋದಿ ಅಮೆರಿಕ ಅಧ್ಯಕ್ಷ ಬೈಡನ್, ಪೋಪ್ ಫ್ರಾನ್ಸಿಸ್, ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಸೇರಿದಂತೆ ಪ್ರಮುಖ ಮುಖಂಡರನ್ನು ಭೇಟಿಯಾದರು ಎಂದು ವರದಿಯಾಗಿದೆ.
ಮೆಲೋನಿ, ಮೋದಿ `ಮೆಲೋಡಿ' ಸೆಲ್ಫೀ
ಜಿ7 ಶೃಂಗಸಭೆಯ ಆತಿಥೇಯ ದೇಶವಾದ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಶನಿವಾರ ಪ್ರಧಾನಿ ಮೋದಿಯ ಜತೆ ನಿಂತು ಸೆಲ್ಫೀ ತೆಗೆಸಿಕೊಂಡು ಅದನ್ನು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು, `ಹಲೋ ಫ್ರಮ್ ಮೆಲೋಡಿ ಟೀಂ' ಎಂದಿದ್ದಾರೆ. ಮೋದಿ ಗಟ್ಟಿಯಾಗಿ ನಗುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತಿದೆ. ಈ ವೀಡಿಯೊ ವೈರಲ್ ಆಗಿದೆ.
ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ತನ್ನ ಮೊದಲ ವಿದೇಶ ಪ್ರವಾಸದಲ್ಲಿ ಶುಕ್ರವಾರ ಇಟಲಿಗೆ ಆಗಮಿಸಿದ್ದ ಮೋದಿಯನ್ನು ಇಟಲಿ ಪ್ರಧಾನಿ ಜಾರ್ಜಿಯಾ `ನಮಸ್ತೆ' ಎಂದು ಸ್ವಾಗತಿಸಿದ್ದರು.