ನವದೆಹಲಿ: ಜೂನ್ 4 ರಂದು ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಇವಿಎಂಗಳಲ್ಲಿ ಅಳವಡಿಸಲಾಗಿರುವ ಮೈಕ್ರೋ ಕಂಟ್ರೋಲರ್ ಚಿಪ್‌ಗಳಲ್ಲಿ ಟ್ಯಾಂಪರಿಂಗ್ ಅಥವಾ ಮಾರ್ಪಾಡುಗಳನ್ನು ಪರಿಶೀಲಿಸುವಂತೆ ಕೋರಿ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ನೊಂದ ಅಭ್ಯರ್ಥಿಗಳು ಚುನಾವಣಾ ಆಯೋಗವು ಎಂಟು ಅರ್ಜಿಗಳನ್ನು ಸಲ್ಲಿಸಲಾಗಿದೆ.
ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆಯ ಅನುಮಾನ "ಆಧಾರರಹಿತ" ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್, ಹಳೆಯ ಪೇಪರ್ ಬ್ಯಾಲೆಟ್ ಸಿಸ್ಟಮ್ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ಏಪ್ರಿಲ್ 26 ರಂದು ತಿರಸ್ಕರಿಸಿತ್ತು. ಆದರೆ ಅದೇ ಸಮಯದಲ್ಲಿ, ಸರ್ವೋಚ್ಚ ನ್ಯಾಯಾಲಯವು ಮತದಾನದ ಫಲಿತಾಂಶಗಳಲ್ಲಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದ ಅಭ್ಯರ್ಥಿಗಳಿಗೆ ಒಂದು ಅವಕಾಶವನ್ನು ನೀಡಿತ್ತು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 5 ರಷ್ಟು ಇವಿಎಂಗಳಲ್ಲಿ ಅಳವಡಿಸಲಾಗಿರುವ ಮೈಕ್ರೋ-ಕಂಟ್ರೋಲರ್ ಚಿಪ್‌ಗಳನ್ನು ಲಿಖಿತವಾಗಿ ಪರಿಶೀಲಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು.
ಇದೀಗ ಬಿಜೆಪಿಯ ಅಹಮದ್‌ನಗರ(ಮಹಾರಾಷ್ಟ್ರ) ಅಭ್ಯರ್ಥಿ ಸುಜಯ್ ವಿಖೆ-ಪಾಟೀಲ್ ಅವರು 40 ಮತಗಟ್ಟೆಗಳಲ್ಲಿ ಇವಿಎಂ ಯಂತ್ರಗಳ ಪರಿಶೀಲನೆಗೆ ಕೋರಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಖೆ ಪಾಟೀಲ್ ಅವರು ಎನ್‌ಸಿಪಿ(ಶರದ್ ಪವಾರ್) ಬಣದ ನೀಲೇಶ್ ಲಂಕೆ ವಿರುದ್ಧ ಸೋತಿದ್ದಾರೆ.
ಚುನಾವಣಾ ಆಯೋಗ ಹಂಚಿಕೊಂಡ ಮಾಹಿತಿಯ ಪ್ರಕಾರ ವೈಎಸ್‌ಆರ್‌ಸಿಪಿ ಮತ್ತು ಡಿಎಂಡಿಕೆ ಅಭ್ಯರ್ಥಿ ಕೂಡ ಇವಿಎಂ ಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಒಟ್ಟು ಆರು ರಾಜ್ಯಗಳ ಎಂಟು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಇವಿಎಂ ಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದ್ದು, ಒಟ್ಟು 92 ಮತಗಟ್ಟೆಗಳ ಇವಿಎಂ ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.
ಜೂನ್ 1 ರಂದು ಚುನಾವಣಾ ಆಯೋಗ ಹೊರಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನದ ಪ್ರಕಾರ, ಎರಡನೇ ಅಥವಾ ಮೂರನೇ ಸ್ಥಾನ ಪಡೆಯುವ ಅಭ್ಯರ್ಥಿಗಳು ಇವಿಎಂಗಳ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಲು ಪ್ರತಿ ಇವಿಎಂ ಸೆಟ್‌ಗೆ 47,200 ರೂ. ಪಾವತಿಸಬೇಕಾಗುತ್ತದೆ.