ನೊಯಿಡಾ: ಷೇರು ಮಾರುಕಟ್ಟೆ ವಹಿವಾಟಿಗೆ ಸಂಬಂಧಿಸಿದಂತೆ ವಾಟ್ಸ್‌ಆಯಪ್ ಗುಂಪಿಗೆ ಸೇರಿಕೊಂಡ ನೊಯಿಡಾ ಮೂಲದ ವ್ಯಕ್ತಿಯೊಬ್ಬರು ಒಂದು ತಿಂಗಳಲ್ಲಿ ₹9 ಕೋಟಿ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರಜತ್ ಬಾತ್ರಾ (40) ಎಂಬ ಉದ್ಯಮಿಯೇ ಹಣ ಕಳೆದುಕೊಂಡವರು.
'ಸೆಕ್ಟರ್ 36ರಲ್ಲಿರುವ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚಕರ ಖಾತೆಗೆ ವರ್ಗಾವಣೆ ಆಗಬೇಕಿದ್ದ ₹1.62 ಕೋಟಿ ಹಣವನ್ನು ವ್ಯಾಪಾರಿಯ ಖಾತೆಯಲ್ಲೇ ತಡೆಹಿಡಿಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ' ಎಂದು ಪೊಲೀಸರು ಹೇಳಿದ್ದಾರೆ.
'ಮೇ 1ರಂದು ತನ್ನ ಫೋನ್ ಸಂಖ್ಯೆಯನ್ನು ವಾಟ್ಸ್‌ಆಯಪ್ ಗುಂಪಿಗೆ ಸೇರಿಸಲಾಯಿತು. ವಿವಿಧ ಸ್ಟಾಕ್‌ಗಳಿಗೆ ಹಣ ಹೂಡಿ, ಲಾಭ ಗಳಿಸುವ ನಿಟ್ಟಿನಲ್ಲಿ ಮಾಹಿತಿ ನೀಡಲಾಯಿತು. ಅಲ್ಲಿಂದ ಸಣ್ಣ ಪ್ರಮಾಣದಲ್ಲಿ ಹೂಡಿಕೆ ಆರಂಭಿಸಿದೆ. ಮೇ 27ರಂದು, ₹9.09 ಕೋಟಿಯನ್ನು ಹೂಡಿಕೆ ಮಾಡಿದೆ. ಅದಾದ ನಂತರ ಟ್ರೇಡಿಂಗ್ ಖಾತೆ ಸ್ಥಗಿತಗೊಂಡಿತು' ಎಂದು ರಜತ್ ಬಾತ್ರಾ ಅವರು ದೂರಿನಲ್ಲಿ ಹೇಳಿದ್ದಾರೆ.
'ದೂರು ಸಲ್ಲಿಕೆಯಾಗುತ್ತಿದ್ದಂತೆ, ತನಿಖೆ ಆರಂಭಿಸಲಾಯಿತು. ರಜತ್ ಅವರ ಬ್ಯಾಂಕ್ ಖಾತೆಯಿಂದ ₹1.62 ಕೋಟಿ ವರ್ಗಾವಣೆಯನ್ನು ಸ್ಥಗಿತಗೊಳಿಸುವಲ್ಲಿ ಸಫಲರಾದೆವು. ಹಣವು ಚೆನ್ನೈ, ಅಸ್ಸಾಂ, ಭುವನೇಶ್ವರ, ಹರಿಯಾಣ ಹಾಗೂ ರಾಜಸ್ಥಾನದಲ್ಲಿರುವ ವಿವಿಧ ಖಾತೆಗಳಿಗೆ ವರ್ಗಾವಣೆಗೊಂಡಿದೆ. ಈ ವಂಚಕರ ಜಾಲ ಭೇದಿಸಲು ಹಲವು ತಂಡಗಳನ್ನು ರಚಿಸಲಾಗಿದೆ' ಎಂದು ಎಸಿಪಿ ವಿವೇಕ್ ರಂಜನ್ ರಾಜ್ ಹೇಳಿದ್ದಾರೆ.
'ಆನ್‌ಲೈನ್ ವೇದಿಕೆಯಲ್ಲಿ ನಡೆಯುವ ಸೈಬರ್ ಅಪರಾಧಗಳ ಕುರಿತು ಜನರು ಜಾಗರೂಕರಾಗಿರಬೇಕು. ವಂಚನೆಗೊಳಗಾದ ತಕ್ಷಣವೇ ಠಾಣೆಗೆ ಮಾಹಿತಿ ನೀಡಿದರೆ ಹೆಚ್ಚಿನ ಹಾನಿ ತಪ್ಪಿಸಬಹುದು. ಇದಕ್ಕಾಗಿಯೇ ಇರುವ ಸಹಾಯವಾಣಿ 1930 ಅಥವಾ ತುರ್ತು ಸಂಖ್ಯೆ 112 ಅಥವಾ ಹತ್ತಿರದ ಸೈಬರ್ ಅಪರಾಧ ಠಾಣೆಗೆ ಭೇಟಿ ನೀಡಬಹುದು' ಎಂದಿದ್ದಾರೆ.