ಇಟಾನಗರ: ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಾಧಿಸಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದೆ.
ಮತದಾನಕ್ಕೂ ಮೊದಲೇ 10 ಸ್ಥಾನಗಳನ್ನು ಅವಿರೋಧವಾಗಿ ಗೆದ್ದುಕೊಂಡಿದ್ದ ಬಿಜೆಪಿ, ಉಳಿದ 50 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 34 ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಂಡಿದೆ.
ಒಟ್ಟಾರೆ 55 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಹೊರತುಪಡಿಸಿ, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) 5, ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) 2 ಮತ್ತು ಇತರ ಅಭ್ಯರ್ಥಿಗಳು 4 ಸ್ಥಾನ ಗೆದ್ದಿದ್ದಾರೆ.
ಬಿಜೆಪಿ ಸ್ಥಾನ ಸದ್ಯ 44ಕ್ಕೆ ಏರಿದ್ದು, ಅಧಿಕಾರದಲ್ಲಿ ಮುಂದುವರಿಯುವ ಅವಕಾಶ ಗಿಟ್ಟಿಸಿಕೊಂಡಿದೆ. ಜೊತೆಗೆ, ಇನ್ನಷ್ಟೇ ಫಲಿತಾಂಶ ಪ್ರಕಟವಾಗಬೇಕಿರುವ 5 ಕ್ಷೇತ್ರಗಳಲ್ಲಿ, 2 ಕಡೆ ಮುನ್ನಡೆ ಕಾಯ್ದುಕೊಂಡಿದ್ದು ಭಾರಿ ಬಹುಮತವನ್ನು ಖಾತ್ರಿಪಡಿಸಿದೆ.
ಅವಿರೋಧವಾಗಿ ಆಯ್ಕೆಯಾದ ಕ್ಷೇತ್ರಗಳ ಪೈಕಿ ಆರರಲ್ಲಿ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಎದುರಾಳಿಗಳು ನಾಮಪತ್ರ ವಾಪಸ್ ಪಡೆದಿದ್ದರು. ಹೀಗಾಗಿ, ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಉಪಮುಖ್ಯಮಂತ್ರಿ ಛೌನಾ ಮೇನ್ ಅವರೂ ಸೇರಿದಂತೆ ಹತ್ತು ಮಂದಿ ಅವಿರೋಧವಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ.
ಪೆಮಾ ಖಂಡು ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆ ಇದೆ.
2019ರ ಚುನಾವಣೆಯಲ್ಲಿ ಬಿಜೆಪಿಯು 41 ಸ್ಥಾನಗಳನ್ನು ಜಯಿಸಿತ್ತು. ಜೆಡಿಯು 7, ಎನ್‌ಪಿಪಿ 5, ಕಾಂಗ್ರೆಸ್ 4 ಮತ್ತು ಪಿಪಿಎ 1 ಸ್ಥಾನ ಗೆದ್ದಿತ್ತು. ಎರಡು ಸ್ಥಾನಗಳಲ್ಲಿ ಪಕ್ಷೇತರರು ಜಯಿಸಿದ್ದರು.