ಆಗ್ರ: ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬರದ ಹಿನ್ನೆಲೆ ಕೋಪಗೊಂಡ ರಾಷ್ಟ್ರೀಯ ಹಿಂದೂ ಪರಿಷತ್(ಆರ್‌ಎಚ್‌ಪಿ) ಅಧ್ಯಕ್ಷ ಗೋವಿಂದ ಪರಾಶರ, ಚುನಾವಣಾ ಸುದ್ದಿ ಪ್ರಸಾರ ಮಾಡುತ್ತಿದ್ದ ಟಿ.ವಿಗೆ ಬೆಂಕಿ ಹಚ್ಚಿ ಅಸಮಾಧಾನ ಹೊರಹಾಕಿದ್ದಾರೆ.
ಮಂಗಳವಾರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಸುದ್ದಿ ವಾಹಿನಿಯೊಂದು ಫಲಿತಾಂಶ ಕುರಿತ ಸುದ್ದಿಯನ್ನು ಪ್ರಸಾರ ಮಾಡುತ್ತಿತ್ತು.
ಈ ವೇಳೆ ಅಲ್ಲಿಗೆ ಬಂದ ಪರಾಶರ ಅವರು ಗೋಡೆಗೆ ಅಂಟಿಸಿದ್ದ ಸ್ಮಾರ್ಟ್ ಟಿ.ವಿಯನ್ನು ಕಿತ್ತು ನೆಲಕ್ಕೆ ಅಪ್ಪಳಿಸಿದ್ದಾರೆ. ನಂತರ ಕಾಲಲ್ಲಿ ತುಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿ.ವಿಯನ್ನು ಹೊರಗೆ ತಂದು ಅದಕ್ಕೆ ಬೆಂಕಿ ಹಚ್ಚಿದ್ದಾರೆ.
ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದೇಶದ ಜನರ ತೀರ್ಪಿಗೆ ತಲೆಬಾಗುವಂತೆ ಪರಾಶರ ಅವರಿಗೆ ನೆಟ್ಟಿಗರು ಕಿವಿ ಮಾತು ಹೇಳಿದ್ದಾರೆ.
543 ಲೋಕಸಭಾ ಸೀಟುಗಳ ಪೈಕಿ 292 ಸ್ಥಾನಗಳನ್ನು ಎನ್‌ಡಿಎ ಮೈತ್ರಿಕೂಟ ಗೆದ್ದಿದ್ದು, ಬಿಜೆಪಿ 240ರಲ್ಲಿ ಜಯ ಸಾಧಿಸಿತ್ತು. 'ಈ ಲೋಕಸಭೆಯಲ್ಲಿ 400 ಸ್ಥಾನಗಳನ್ನು ಎನ್‌ಡಿಎ ಗೆಲ್ಲಲಿದೆ' ಎಂದು ಪ್ರಧಾನಿ ಮೋದಿ ಸೇರಿ ಬಿಜೆಪಿ ಹಲವು ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಸರ್ಕಾರ ರಚನೆಗೆ ಅಗತ್ಯವಿರುವ 272 ಸ್ಥಾನಗಳನ್ನು ಗೆಲ್ಲುವಲ್ಲಿಯೂ ಬಿಜೆಪಿ ಸೋತಿತ್ತು.