ಇಟಾನಗರ: ಅರುಣಾಚಲ ಪ್ರದೇಶದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಪೆಮಾ ಖಂಡು ಅವರು ಮರು ಆಯ್ಕೆಯಾಗಿದ್ದು, ಮತ್ತೊಂದು ಅವಧಿಗೆ ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ನಾಯಕರಾದ ರವಿಶಂಕರ್ ಪ್ರಸಾದ್ ಮತ್ತು ತರುಣ್ ಚುಗ್ ಅವರು ವೀಕ್ಷಕರಾಗಿ ಆಗಮಿಸಿದ್ದರು.
ಛುಗ್ ಮತ್ತು ರವಿಶಂಕರ್ ಪ್ರಸಾದ್ ಅವರು ಕೇಂದ್ರದಿಂದ ಪಕ್ಷದ ವೀಕ್ಷಕರಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಈಶಾನ್ಯ ರಾಜ್ಯದವರೇ ಆಗಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರೂ ಕೂಡ ಹಾಜರಿದ್ದರು.
ನಂತರ ಸಂಜೆ ಪೇಮಾ ಖಂಡು ಅವರು ಛುಗ್ ಮತ್ತು ಇತರ ಕೆಲವು ಶಾಸಕರೊಂದಿಗೆ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೆ.ಟಿ.ಪರ್ನಾಯಕ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ರಾಜ್ಯಪಾಲರು ಪೇಮಾ ಖಂಡು ಅವರಿಗೆ ಪ್ರಮಾಣ ವಚನ ಸ್ವೀಕರಿಸುವಂತೆ ಆಹ್ವಾನಿಸಿದರು.
ಬಿಜೆಪಿ ಸತತ ಮೂರನೇ ಬಾರಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, 60 ಸ್ಥಾನಗಳ ಪೈಕಿ 46 ಸ್ಥಾನಗಳನ್ನು ಗೆದ್ದಿದೆ.