ಶಿವಪುರಿ: 'ಲೋಕಸಭಾ ಚುನಾವಣೆಯಲ್ಲಿ, ಉತ್ತರ ಪ್ರದೇಶದಲ್ಲಿ ಪಕ್ಷದ ಕಳಪೆ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ದೂಷಿಸಬಾರದು' ಎಂದು ಬಿಜೆಪಿಯ ನಾಯಕಿ ಉಮಾ ಭಾರತಿ ಶನಿವಾರ ಇಲ್ಲಿ ಅಭಿಪ್ರಾಯಪಟ್ಟಿದ್ದಾರೆ.
'1992ರ ಡಿ.6ರಂದು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕವೂ ಪಕ್ಷದ ಸಾಧನೆ ರಾಜ್ಯದಲ್ಲಿ ಕಳಪೆಯಾಗಿತ್ತು. ಸೋತರೂ ರಾಮಮಂದಿರ ನಿರ್ಮಾಣದ ಸಂಕಲ್ಪದಿಂದ ನಾವು ಹಿಂದೆ ಸರಿಯಲಿಲ್ಲ. ಎಂದೆಂದಿಗೂ ಅಯೋಧ್ಯೆಯನ್ನು ಮತಗಳೊಂದಿಗೆ ಸಂಯೋಜಿಸಿಲ್ಲ. ಇದೀಗ ಮಥುರಾ-ಕಾಶಿಯಲ್ಲಿನ ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ವಿವಾದಗಳನ್ನು ಸಹ ನಾವು ಮತಗಳೊಂದಿಗೆ ಸಂಯೋಜಿಸುತ್ತಿಲ್ಲ' ಎಂದು ಕೇಂದ್ರದ ಮಾಜಿ ಸಚಿವೆ ತಿಳಿಸಿದ್ದಾರೆ.
'ಉತ್ತರ ಪ್ರದೇಶದ ಫಲಿತಾಂಶವನ್ನು ಭಗವಾನ್ ರಾಮನ ಮೇಲೆ ಜನರ ಭಕ್ತಿ ಕಡಿಮೆಯಾಗಿದೆ ಎಂದು ಅರ್ಥೈಸಿಕೊಳ್ಳಬೇಕಿಲ್ಲ. ಪ್ರತಿಯೊಬ್ಬ ರಾಮಭಕ್ತನೂ ಬಿಜೆಪಿಗೆ ಮತ ಹಾಕುತ್ತಾನೆ ಎಂಬ ದುರಂಹಂಕಾರ ನಮಗೆ ಬೇಡ. ನಮಗೆ ಮತ ನೀಡದವರು ರಾಮ ಭಕ್ತರಲ್ಲ ಎಂದು ಭಾವಿಸಬಾರದು. ಇದು (ಸಮೀಕ್ಷೆಯ ಫಲಿತಾಂಶ) ಕೆಲವು ನಿರ್ಲಕ್ಷ್ಯದ ಫಲಿತಾಂಶವಾಗಿದೆಯೇ ಹೊರತು ಬೇರೇನೂ ಅಲ್ಲ' ಎಂದು ಅವರು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.