ನವದೆಹಲಿ: ಭಾರತೀಯ ರಿಜರ್ವ್ ಬ್ಯಾಂಕ್ ಸುಮಾರು 100 ಟನ್ ಚಿನ್ನವನ್ನು ಸಂಗ್ರಹಿಸಲು ಮುಂದಾಗಿದೆ. ಯುನೈಟೆಡ್ ಕಿಂಗ್ಡಮ್(ಯುಕೆ)ಯಿಂದ ಶೀಘ್ರದಲ್ಲೇ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.
ಬಂಗಾರ ಸಂಗ್ರಹಿಸುವ ಯೋಜನೆ ದೇಶ ಆರ್ಥಿಕವಾಗಿ ಸದೃಢವಾಗುತ್ತಿರುವುದರ ಸಂಕೇತವಾಗಿದ್ದು, ಹಲವು ದೇಶಗಳು ದಿವಾಳಿಯಾಗುತ್ತಿರುವ ಈ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ.
1991ರಲ್ಲಿ ಚಂದ್ರಶೇಖರ್ ಪ್ರಧಾನ ಮಂತ್ರಿಯಾಗಿದ್ದಾಗ ವಿದೇಶಿ ವಿನಿಮಯ ಬಿಕ್ಕಟ್ಟಿಗೆ ಒಳಗಾಗಿದ್ದರಿಂದ ಆರ್‌ಬಿಐ ತನ್ನ ಬಳಿ ಸಂಗ್ರಹಿಸಿದ್ದ ಚಿನ್ನವನ್ನು ಒತ್ತೆ ಇಟ್ಟಿತ್ತು. ಆಗ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ಅಲ್ಲಿಂದೀಚೆಗೆ ಭಾರತ ಇಷ್ಟು ದೊಡ್ಡ ಪ್ರಮಾಣದ ಚಿನ್ನವನ್ನು ಸಂಗ್ರಹಿಸುತ್ತಿರುವುದು ಇದೇ ಮೊದಲು.
ಚಿನ್ನದ ಸಾಗಾಣಿಕೆಗೆ ಆರ್‌ಬಿಐ ವಿಮಾನಗಳನ್ನು ಬಳಸಿದ್ದು,ಬ ಮುಂಬೈನ ಮಿಂಟ್ ರಸ್ತೆಯಲ್ಲಿರುವ ಆರ್‌ಬಿಐನ ಹಳೆಯ ಕಚೇರಿ ಕಟ್ಟಡ ಮತ್ತು ನಾಗ್ಪುರದಲ್ಲಿರುವ ಕಮಾನುಗಳಲ್ಲಿ ಚಿನ್ನವನ್ನು ಸಂಗ್ರಹಿಸಲಾಗುತ್ತದೆ. ಆರ್‌ಬಿಐ ಕೆಲವು ವರ್ಷಗಳ ಹಿಂದೆ ಚಿನ್ನವನ್ನು ಖರೀದಿಸಲು ಪ್ರಾರಂಭಿಸಿತು.
ಸಾಗರೋತ್ತರದಲ್ಲಿ ದಾಸ್ತಾನು ಹೆಚ್ಚುತ್ತಿರುವ ಕಾರಣ, ಸ್ವಲ್ಪ ಚಿನ್ನವನ್ನು ಭಾರತಕ್ಕೆ ಪಡೆಯಲು ನಿರ್ಧರಿಸಲಾಯಿತು ಎಂದು ಆರ್‌ಬಿಐನ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ.
ಇದು ಭಾರತದ ಆರ್ಥಿಕತೆಯ ಬಲವನ್ನು ತೋರಿಸುತ್ತದೆ ಮತ್ತು 1991 ರ ಪರಿಸ್ಥಿತಿಗೆ ತೀವ್ರ ವ್ಯತಿರಿಕ್ತವಾಗಿದೆ ಎಂದು ಮೂಲವೊಂದು ಹೇಳಿದೆ.
ಅನೇಕ ಕೇಂದ್ರೀಯ ಬ್ಯಾಂಕುಗಳಿಗೆ, ಬ್ಯಾಂಕ್ ಆಫ್ ಇಂಗ್ಲೆಂಡ್ ಸಾಂಪ್ರದಾಯಿಕವಾಗಿ ಚಿನ್ನ ಇರಿಸಲು ಭಂಡಾರವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತವು ಇದಕ್ಕೆ ಹೊರತಾಗಿಲ್ಲ, ಸ್ವಾತಂತ್ರ್ಯದ ಮೊದಲು ಲಂಡನ್‌ನಲ್ಲಿ ಚಿನ್ನವನ್ನು ಇರಿಸಲಾಗುತ್ತಿತ್ತು.
ಆರ್‌ಬಿಐ 822.1 ಟನ್ ಚಿನ್ನವನ್ನು ಹೊಂದಿದ್ದು, ಮಾರ್ಚ್ ಅಂತ್ಯದ ವೇಳೆಗೆ 413.8 ಟನ್ ಬಂಗಾರವನ್ನು ವಿದೇಶದಲ್ಲಿ ಸಂಗ್ರಹಿಸಲಾಗಿದೆ ಎಂದು ಡೇಟಾ ತೋರಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನವನ್ನು ಖರೀದಿಸಿದ ಕೇಂದ್ರೀಯ ಬ್ಯಾಂಕ್‌ಗಳಲ್ಲಿ ಆರ್‌ಬಿಐ ಕೂಡ ಒಂದಾಗಿದೆ, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್ ತನ್ನ ಸಂಗ್ರಹಣೆಗೆ ಸೇರಿಸಿದೆ.
ಆರ್‌ಬಿಐ ಕಳೆದವರ್ಷಕ್ಕೆ ಹೋಲಿಸಿದರೆ 2024ರ ಜನವರಿಯಿಂದ ಏಪ್ರಿಲ್ ತನಕ 1.5 ಪಟ್ಟು ಹೆಚ್ಚು ಚಿನ್ನವನ್ನು ಖರೀದಿಸಿದೆ. ಇದು ಸವಾಲಿನ ಸಮಯದಲ್ಲಿ ಮೀಸಲು ಕಾರ್ಯತಂತ್ರದ ಭಾಗವಾಗಿದೆ ಎಂದು ಪರಿಗಣಿಸಲಾಗಿದೆ.