ಗಾಝಾ: ಗಾಝಾಕ್ಕೆ ತನ್ನ ಮುತ್ತಿಗೆಯನ್ನು ಮುಂದುವರಿಸಿರುವ ಇಸ್ರೇಲ್ ನೆರವು ಗುಂಪುಗಳು ಈ ಪ್ರದೇಶಕ್ಕೆ ಸಾಕಷ್ಟು ಆಹಾರವನ್ನು ಪೂರೈಸುವುದನ್ನು ತಡೆಯುವ ಮೂಲಕ ಕೃತಕ ಕ್ಷಾಮವನ್ನು ಸೃಷ್ಟಿಸಿದೆ. ಮಕ್ಕಳು ಹಸಿವೆಯಿಂದ ತಮ್ಮ ಹೆತ್ತವರ ತೋಳುಗಳಲ್ಲಿಯೇ ಕೊನೆಯುಸಿರೆಳೆಯುತ್ತಿದ್ದಾರೆ.
ಎಂಟು ತಿಂಗಳಿಗೂ ಅಧಿಕ ಸಮಯದಿಂದ ನಿರಂತರವಾಗಿ ನಡೆಯುತ್ತಿರುವ ಇಸ್ರೇಲಿ ಬಾಂಬ್ ದಾಳಿಗಳು ಗಾಝಾದ ಮೂಲಸೌಕರ್ಯಗಳನ್ನು, ಸಮುದಾಯಗಳನ್ನು ನಾಶಗೊಳಿಸಿದೆ. ಇಡೀ ಪ್ರದೇಶದಲ್ಲಿ ಕಟ್ಟಡಗಳ ಅವಶೇಷಗಳು ರಾಶಿಯಾಗಿ ಬಿದ್ದುಕೊಂಡಿವೆ. ತೀವ್ರ ತಾಪಮಾನದಿಂದಾಗಿ ನೀರಿನ ಕೊರತೆಯಿಂದ ಈಗಾಗಲೇ ಒತ್ತಡದಲ್ಲಿರುವ ನೈರ್ಮಲ್ಯ ವ್ಯವಸ್ಥೆಗಳು ನಿಷ್ಕ್ರಿಯಗೊಂಡಿದ್ದು, ಶುದ್ಧ ನೀರು ಕೂಡ ಲಭ್ಯವಾಗುತ್ತಿಲ್ಲ.
ಗಾಝಾದಲ್ಲಿ ಇಸ್ರೇಲ್ ಯುದ್ಧವು ಪ್ರದೇಶದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದೆ. ಅಪೌಷ್ಟಿಕ ಮಕ್ಕಳಿಗೆ ಚಿಕಿತ್ಸೆ ನೀಡಲೂ ಆಸ್ಪತ್ರೆಗಳ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಶಿಶುಗಳಿಗೆ ಹಾಲಿಗಾಗಿ ಬೇಡಿಕೊಳ್ಳುವ ಪೋಷಕರನ್ನು ವಾಪಸ್ ಕಳುಹಿಸುವುದು ತಮಗೆ ಅನಿವಾರ್ಯವಾಗಿದೆ. ದೀರ್ಘಕಾಲಿಕ ಕಾಯಿಲೆಗಳಿಂದ ನರಳುತ್ತಿರುವ ಯುವರೋಗಿಗಳ ಸಂಕಷ್ಟವನ್ನು ಹಸಿವು ಇನ್ನಷ್ಟು ಹೆಚ್ಚಿಸಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ವೈದ್ಯರು ತಮ್ಮ ಹತಾಶೆಯನ್ನು ತೋಡಿಕೊಂಡಿದ್ದಾರೆ.
ಜಾಗತಿಕ ಆಹಾರ ಭದ್ರತೆ ಮತ್ತು ಅಪೌಷ್ಟಿಕತೆಯನ್ನು ನಿರ್ಧರಿಸುವ ಸಮಗ್ರ ಆಹಾರ ಭದ್ರತಾ ಹಂತ ವರ್ಗೀಕರಣ (ಐಪಿಸಿ)ವು ಮಂಗಳವಾರ ಪ್ರಕಟಿಸಿರುವ ವರದಿಯು, ಮುಂದಿನ ಮೂರು ತಿಂಗಳುಗಳಲ್ಲಿ ಇಡೀ ಗಾಝಾ ಪ್ರದೇಶವು ಕ್ಷಾಮವನ್ನು ಎದುರಿಸಲಿದೆ ಎಂದು ಎಚ್ಚರಿಕೆ ನೀಡಿದೆ.
ಗಾಝಾದಲ್ಲಿ ಈಗಾಗಲೇ 34 ಮಕ್ಕಳು ಅಪೌಷ್ಟಿಕತೆಯಿಂದ ಮೃತಪಟ್ಟಿದ್ದಾರೆ ಎಂದು ಸರಕಾರಿ ಮಾಧ್ಯಮ ಕಚೇರಿಯು ಜೂ.22ರಂದು ವರದಿ ಮಾಡಿತ್ತು. ಗಾಝಾಕ್ಕೆ ಸೀಮಿತ ಪ್ರವೇಶವು ಅಲ್ಲಿನ ಬಿಕ್ಕಟ್ಟನ್ನು ಪೂರ್ಣವಾಗಿ ಮೌಲ್ಯಮಾಪನ ಮಾಡುವ ನೆರವು ಸಂಸ್ಥೆಗಳ ಪ್ರಯತ್ನಗಳಿಗೆ ಅಡ್ಡಿಯಾಗಿರುವುದರಿಂದ ನಿಜವಾದ ಸಾವುಗಳ ಸಂಖ್ಯೆ ಹೆಚ್ಚೇ ಇರಬಹುದು. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 50,000ಕ್ಕೂ ಅಧಿಕ ಮಕ್ಕಳಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಫೆಲೆಸ್ತೀನ್ ನಿರಾಶ್ರಿತರಿಗಾಗಿರುವ ವಿಶ್ವಸಂಸ್ಥೆಯ ಏಜೆನ್ಸಿ( ಯುಎನ್‌ಆರ್ಡಬ್ಲ್ಯುಎ) ಈ ತಿಂಗಳ ಆರಂಭದಲ್ಲಿ ಹೇಳಿತ್ತು.
ಗಾಝಾಕ್ಕೆ ಪೂರೈಕೆಯಾಗುವ ನೆರವಿಗೆ ಯಾವುದೇ ನಿರ್ಬಂಧವನ್ನು ತಾನು ಹೇರಿಲ್ಲ ಎಂದು ಇಸ್ರೇಲ್ ಹೇಳಿಕೊಳ್ಳುತ್ತಿದೆ, ಆದರೆ ಟ್ರಕ್ ಗಳ ತಪಾಸಣೆ, ಭೂ ಮಾರ್ಗಗಳ ಮೇಲಿನ ನಿರ್ಬಂಧಗಳು ಮತ್ತು ಹೆಚ್ಚುತ್ತಿರುವ ಬಾಂಬ್ ದಾಳಿಗಳಿಂದಾಗಿ ಪರಿಹಾರ ಸಾಮಗ್ರಿಗಳು ಗಾಝಾವನ್ನು ಸರಿಯಾಗಿ ತಲುಪುತ್ತಿಲ್ಲ. ಒಂದು ವೇಳೆ ನೆರವು ತಲುಪಿದರೂ ಹಸಿದಿರುವ ಫೆಲೆಸ್ತೀನಿಗಳು ಟ್ರಕ್ ಗಳಿಗೆ ಮುತ್ತಿಗೆ ಹಾಕುವುದರಿಂದ ವಿತರಣೆ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ.
ಸಂಘರ್ಷದ ಸಮಯದಲ್ಲಿ ಗಾಝಾದಲ್ಲಿ ಪೋಲಿಸರ ಅನುಪಸ್ಥಿತಿಯು ಸಂಪೂರ್ಣ ಅರಾಜಕತೆಗೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಯಂಟೊನಿಯೊ ಗುರೆಝ್ ಇತ್ತೀಚಿಗೆ ಎಚ್ಚರಿಕೆ ನೀಡಿದ್ದರು.
ಇಸ್ರೇಲ್ 'ಸಂಪೂರ್ಣವಾಗಿ ಮಾನವ ನಿರ್ಮಿತ ವಿಪತ್ತನ್ನು 'ಸೃಷ್ಟಿಸುತ್ತಿದೆ ಎಂದು ವಿಶ್ವಸಂಸ್ಥೆಯು ಈ ವರ್ಷದ ಆರಂಭದಲ್ಲಿ ಎಚ್ಚರಿಕೆ ನೀಡಿತ್ತು.