ಇಟಾಲಿ: ಇತ್ತೀಚೆಗೆ ಇಟಾಲಿಯಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ- ಪೋಪ್ ಭೇಟಿ ಕುರಿತು ಕೇರಳ ಕಾಂಗ್ರೆಸ್ ಪ್ರಕಟಿಸಿದ್ದ ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ ಕ್ರೈಸ್ತರಿಗೆ ಅಪಮಾನವಾಗಿರುವ ಆರೋಪ ಕೇಳಿಬಂದಿದ್ದು ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಿದೆ.
ಪ್ರಧಾನಿ ಮೋದಿ ಪೋಪ್ ಅವರನ್ನು ಭೇಟಿ ಮಾಡಿದ್ದ ಫೋಟೋ ಹಂಚಿಕೊಂಡಿದ್ದ ಕಾಂಗ್ರೆಸ್ ಪಕ್ಷ, ಪೋಪ್ ಗೆ ಕೊನೆಗೂ ದೇವರನ್ನು ನೋಡುವ ಅವಕಾಶ ಸಿಕ್ಕಿತು ಎಂದು ಹೇಳಿತ್ತು.
ಪ್ರಧಾನಿ ಮೋದಿ ಚುನಾವಣೆಯ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ನಿಮಗೆ ಇಷ್ಟು ಶಕ್ತಿ ಎಲ್ಲಿಂದ ಬರುತ್ತದೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ, ನನಗೆ ಈ ಶಕ್ತಿ ಬರುವುದು ದೈಹಿಕವಾಗಿ ಅಲ್ಲ (not biological) ದೇವರೇ ಆ ಶಕ್ತಿ ನೀಡುತ್ತಾನೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಇದನ್ನು ಪ್ರಧಾನಿ ತಾವೇ ದೇವರು ಎಂದು ಹೇಳಿಕೊಂಡಿದ್ದಾರೆಂಬ ಅರ್ಥದಲ್ಲಿ ಬಿಂಬಿಸಲಾಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡ ಕೇರಳ ಕಾಂಗ್ರೆಸ್, ಪೋಪ್ ಗೆ ಕೊನೆಗೂ ದೇವರನ್ನು ನೋಡುವ ಅವಕಾಶ ಸಿಕ್ಕಿತು ಎಂದು ವ್ಯಂಗ್ಯವಾಡಿದೆ.
ಕೇರಳ ಕಾಂಗ್ರೆಸ್ ಪೋಸ್ಟ್ ಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ, ಕಾಂಗ್ರೆಸ್ ಪಕ್ಷ ಈ ಪೋಸ್ಟ್ ಹಾಕುವ ಮೂಲಕ ಕ್ರೈಸ್ತ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಹೇಳಿದೆ.
"ಕಾಂಗ್ರೆಸ್ ಮಾಡಿದ ಈ ಟ್ವೀಟ್ ನಲ್ಲಿ ಪ್ರಧಾನಿ ಮೋದಿಯನ್ನು ಲಾರ್ಡ್ ಜೀಸಸ್‌ಗೆ ಸಮನಾಗಿಸಲಾಗಿದೆ. ಇದು ಸಂಪೂರ್ಣವಾಗಿ ಅನಾಹುತವಾಗಿದೆ ಮತ್ತು ಯೇಸುವನ್ನು ಗೌರವಿಸುವ ಕ್ರಿಶ್ಚಿಯನ್ ಸಮುದಾಯಕ್ಕೆ ಅವಮಾನವಾಗಿದೆ. ಕಾಂಗ್ರೆಸ್ ಈ ಮಟ್ಟಕ್ಕೆ ನಿಂತಿರುವುದು ನಾಚಿಕೆಗೇಡಿನ ಸಂಗತಿ" ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಜಾರ್ಜ್ ಕುರಿಯನ್ ಹೇಳಿದ್ದಾರೆ.
ಕೇರಳ ಕಾಂಗ್ರೆಸ್ ನಿನ್ನೆ ರಾತ್ರಿ ಕ್ಷಮೆಯಾಚಿಸಿದೆ ಮತ್ತು ಯಾವುದೇ ಧರ್ಮವನ್ನು ಅವಮಾನಿಸುವುದು ತನ್ನ ಸಂಪ್ರದಾಯವಲ್ಲ ಎಂದು ಹೇಳಿದೆ.