ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯಪದವು ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದ ಬಾಗಿಲು ಒಡೆದು ನುಗ್ಗಿದ ಕಳ್ಳರು ಶಿವಲಿಂಗಕ್ಕೆ ಅಳವಡಿಸಿದ್ದ ಚಿನ್ನ ಹಾಗೂ ಬೆಳ್ಳಿ ಆಭರಣ, ಕಾಣಿಕೆಹುಂಡಿಯಿಂದ ನಗದು ದೋಚಿದ್ದಾರೆ. ದೇವಸ್ಥಾನದ ಅರ್ಚಕ ಶಿವರಾಜ ಭಟ್ಟ ಅವರು ಬೆಳಗ್ಗಿನ ಪೂಜೆಗೆ ದೇವಸ್ಥಾನಕ್ಕೆ ಆಗಮಿಸಿದಾಗ ಕಳವು ಬೆಳಕಿಗೆ ಬಂದಿದೆ. ಸುಮಾರು ಮೂರು ಪವನು ಚಿನ್ನ, ಬೆಳ್ಳಿ ಸಾಮಗ್ರಿ, ಎರಡು ಕಾಣಿಕೆ ಹುಂಡಿಯಿಂದ ನಗದು ಹಣವನ್ನು ಕಳವುಗೈಯಲಾಗಿದೆ.
ಪುರಾತನ ದೇವಾಲಯ ಇದಾಗಿದ್ದು, ಹೊರಾಂಗಣ ಹಾಗೂ ಗರ್ಭಗುಡಿ ಬಾಗಿಲು ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಕಳ್ಳರಿಗೆ ಸುಲಭವಾಗಿ ಬಾಗಿಲು ಒಡೆದು ನುಗ್ಗಲು ಸಹಾಯವಾಗಿತ್ತು. ಬಾಗಿಲು ಒಡೆಯಲು ಬಳಸಿದ್ದರೆನ್ನಲಾದ ಕಬ್ಬಿಣದ ಸಲಾಕೆಯೊಂದನ್ನು ದೇವಾಲಯ ವಠಾರದಿಂದ ಪತ್ತೆಹಚ್ಚಲಾಗಿದೆ. ಮುಖ್ಯ ಅರ್ಚಕ ವಾಸುದೇವ ಭಟ್ ಅವರ ದೂರಿನ ಮೇರೆಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಎರಡು ದಇವಸಗಳ ಹಿಂದೆಯಷ್ಟೆ ಉಪ್ಪಳ ಅಟ್ಟೆಗೋಳಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಕಾಣಿಕೆಹುಂಡಿ ಕಳವುಗೈಯಲಾಗಿತ್ತು.