ನವದೆಹಲಿ: ಇಲ್ಲಿಯ ವಸಂತ ವಿಹಾರ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋಡೆಯು ಮಳೆಯಿಂದಾಗಿ ಶುಕ್ರವಾರ ಕುಸಿದಿತ್ತು. ಆ ಸ್ಥಳದಿಂದ ಮೂವರು ಕಾರ್ಮಿಕರ ಮೃತದೇಹಗಳನ್ನು ಶನಿವಾರ ಹೊರತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೂಲಕ ಮಳೆ ಸಂಬಂಧಿ ಅವಘಡಗಳಿಂದ ದೆಹಲಿಯಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಮೃತಪಟ್ಟವರಲ್ಲಿ ಇಬ್ಬರನ್ನು ಸಂತೋಷ್ ಕುಮಾರ್ ಯಾದವ್ (19) ಮತ್ತು ಸಂತೋಷ್ (38) ಎಂದು ಗುರುತಿಸಲಾಗಿದೆ. ಮೂರನೇ ಮೃತದೇಹದ ಗುರುತು ಪತ್ತೆಯಾಗಿಲ್ಲ ಎಂದು ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್) ತಿಳಿಸಿದೆ.
ಬೇರೆ ಯಾರೂ ಅವಶೇಷಗಳ ಅಡಿ ಸಿಲುಕಿಲ್ಲ ಎಂಬ ಕುರಿತು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಶೋಧಕಾರ್ಯ ಮುಂದುವರಿಸಲಾಗಿದೆ.
ದೆಹಲಿಯಲ್ಲಿ ಶುಕ್ರವಾರ ದಾಖಲೆಯ ಮಳೆಯಾಯಿತು. ಮಳೆ ಸಂಬಂಧಿ ಅನಾಹುತಗಳಲ್ಲಿ ಐವರು ಮೃತರಾದರು.
ಪ್ರಗತಿ ಮೈದಾನ ಸುರಂಗದಲ್ಲಿ ನೀರು: ಸಂಚಾರ ಸ್ಥಗಿತ
ನವದೆಹಲಿ: ಭಾರಿ ಮಳೆಯಿಂದಾಗಿ ದೆಹಲಿಯ ಪ್ರಗತಿ ಮೈದಾನ ಸುರಂಗ ಮಾರ್ಗದಲ್ಲಿ ನೀರು ನಿಂತಿದ್ದು, ಸಂಚಾರವನ್ನು ಶನಿವಾರವೂ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ಸುರಂಗದಿಂದ ನೀರು ಹೊರಹಾಕುವ ಕೆಲಸವು ಜಾರಿಯಲ್ಲಿದೆ. ಶೀಘ್ರದಲ್ಲೇ ಈ ಮಾರ್ಗವನ್ನು ಸಂಚಾರಕ್ಕೆ ಮುಕ್ತ ಮಾಡಲಾಗುವುದು ಎಂದು ಅವರು ತಿಳಿಸಿದರು.
ನಗರದ ಹಲವು ಭಾಗಗಳಲ್ಲಿ ನೀರು ನಿಂತಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಮಿಂಟೊ ಕೆಳಸೇತುವೆ, ಮೂಲ್‌ಚಂದ್ ಕಳಸೇತುವೆ, ಝಖೀರ, ದೌಲಖೌನ್ ಮತ್ತು ಅದ್ಚಿನಿ ಮತ್ತು ಇತರ ರಸ್ತೆಗಳಲ್ಲಿ 4-5 ಗಂಟೆ ಕಾರ್ಯಾಚರಣೆ ನಡೆಸಿ ನೀರು ಹೊರಹಾಕಲಾಗಿದೆ. ಸೀಲಂಪುರ, ಕೃಷ್ಣ ನಗರ ಮತ್ತು ಬದ್ಲಿ ಪ್ರದೇಶಗಳಲ್ಲಿ 2-3 ಗಂಟೆ ಕಾರ್ಯಾಚರಣೆ ನಡೆಸಲಾಯಿತು ಎಂದು ದೆಹಲಿ ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯುಡಿ) ತಿಳಿಸಿದೆ.
ಶುಕ್ರವಾರ ಒಂದೇ ದಿನ 200 ಹೆಚ್ಚು ಕರೆಗಳನ್ನು ಸ್ವೀಕರಿಸಲಾಗಿದೆ. ಕೆಲವೆಡೆ ಮರಗಳು ಉರುಳಿರುವುದಾಗಿಯೂ ಕರೆ ಬಂದಿತ್ತು ಎಂದು ಪಿಡಬ್ಲ್ಯುಡಿ ಹೇಳಿದೆ.