ನವದೆಹಲಿ :ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ಲೋಕಸಭಾ ಚುನಾವಣೆ (Lok Sabha Election 2024) ಫಲಿತಾಂಶ ಹೊರಬಿದ್ದಿದೆ. ಸೋಲು-ಗೆಲುವು ಮುಗಿದಾಯ್ತು.. ಈಗೇನಿದ್ರೂ ಅಂಕಿ-ಸಂಖ್ಯೆ ಆಟ. ಮಿತ್ರ ಪಕ್ಷಗಳೊಂದಿಗೆ ಎನ್‌ಡಿಎ ಸರ್ಕಾರ (NDA Government) ರಚನೆಗೂ ಸಿದ್ಧವಾಗಿದೆ.
ಅತ್ತ ಇಂಡಿಯಾ ಕೂಟವೂ ಆಸೆ ಬಿಟ್ಟಿಲ್ಲ. ಅದು ಒಂದೆಡೆಯಾದ್ರೆ ಈ ಬಾರಿಯ ಚುನಾವಣೆ ಫಲಿತಾಂಶ ಘಟಾನುಘಟಿ ನಾಯಕರಿಗೂ ಶಾಕ್ ಕೊಟ್ಟಿದೆ. ಮೊದಲ ಬಾರಿಗೆ ಸ್ಪರ್ಧಿಸಿದ ಯುವ ಅಭ್ಯರ್ಥಿಗಳು ಮಹಾ ನಾಯಕರಿಗೇ ಮಣ್ಣು ಮುಕ್ಕಿಸಿದ್ದಾರೆ. ಈ ಚುನಾವಣೆ ಕೆಲವರಿಗೆ ಸಿಹಿ ನೀಡಿ ರಾಜಕೀಯ ಮರುಜನ್ಮ ನೀಡಿದರೆ ಇನ್ನೂ ಕೆಲವು ಹಾಲಿ ಸಂಸದರು ಮನೆಯ ದಾರಿ ಹಿಡಿದಿದ್ದಾರೆ.
ದೇಶಕಂಡ ಅತ್ಯುತ್ತಮ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಕಾರ್ಯಕ್ರಮವೊಂದರಲ್ಲಿ ಶಾಲಾ ಮಕ್ಕಳ ಜೊತೆ ಸಂವಾದ ನಡೆಸುವಾಗ ವಿದ್ಯಾರ್ಥಿಯೊಬ್ಬ ನಮ್ಮ ದೇಶದ ಸ್ಟ್ರೆಂಥ್, ವೀಕ್‌ನೆಸ್ ಏನು ಸರ್ ಅಂಥ ಕೇಳಿದ್ದ. ಆಗ ಅಬ್ಧುಲ್ ಕಲಾಂ ಅವರು ಅದ್ಭುತ ಉತ್ತರ ನೀಡಿದ್ರು.. ಈ ದೇಶದ ಸಾಮರ್ಥ್ಯ ನೀವೆ.. 600 ಮಿಲಿಯನ್ ಯುವಜನರೇ ಈ ದೇಶದ ಸ್ಟ್ರೆಂಥ್ ಅಂದಿದ್ರು.. ಅದರಂತೆ ಯುವ ಅಭ್ಯರ್ಥಿಗಳು ಕೂಡಾ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸತ್ ಪ್ರವೇಶಿದ್ದಾರೆ. ರಾಜಕೀಯದಲ್ಲೇ ಪಳಗಿದ್ದ ಹಿರಿಯ ನಾಯಕರಿಗೂ ಠಕ್ಕರ್ ಕೊಟ್ಟು ಗೆಲುವಿನ ಕೇಕೆ ಹಾಕಿದ್ದಾರೆ. ಆ ಮೂಲಕ ಅತ್ಯಂತ ಚಿಕ್ಕ ವಯಸ್ಸಿಗೇ ಸಂಸತ್ ಕದ ತಟ್ಟಿದ್ದಾರೆ.
ಲೋಕಸಭೆ ಸದಸ್ಯರಾಗಲು 25 ವರ್ಷ ಆಗಿರಬೇಕು ಎಂಬ ನಿಯಮವಿದೆ. ಆ ವಯಸ್ಸಿಗೇ ಸಂಸತ್ ಪ್ರವೇಶಿಸಲು ರೆಡಿಯಾಗಿದ್ದಾರೆ ಈ ನಾಲ್ವರು ಯುವ ಸಂಸದರು. ಉತ್ತರ ಪ್ರದೇಶದಿಂದ ಪುಷ್ಪೆಂದ್ರ ಸರೋಜ್, ಪ್ರಿಯಾ ಸರೋಜ್, ಬಿಹಾರದಿಂದ ಶಾಂಭವಿ ಚೌಧರಿ, ರಾಜಸ್ಥಾನದ ಸಂಜನಾ ಜತಾವ್ ಕಿರಿ ವಯಸ್ಸಿಗೆ ಸಂಸದರಾಗಿದ್ದಾರೆ. ಇನ್ನೂ ಕರ್ನಾಟಕ ಸರ್ಕಾರದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಕಂಡ್ರೆ ಹಾಲಿ ಸಂಸದರಿಗೆ ಸೋಲಿನ ರುಚಿ ತೋರಿಸಿ ಸಂಸತ್‌ಗೆ
ಗ್ರ್ಯಾಂಡ್ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ಪುಷ್ಪೇಂದ್ರ ಸರೋಜ್
ಉತ್ತರ ಪ್ರದೇಶದ ಕೌಶಂಬಿಯಿಂದ ಸ್ಪರ್ಧಿಸಿದ್ದ ಪುಷ್ಪೇಂದ್ರ ಸರೋಜ್‌ಗೆ ಈಗ ಜಸ್ಟ್ 25 ವರ್ಷ. 1999 ಮಾರ್ಚ್ 1ರಂದು ಜನಿಸಿರುವ ಸರೋಜ್‌ಗೆ 25 ವರ್ಷ ತುಂಬಿದೆ. ಉತ್ತರ ಪ್ರದೇಶ ಕೌಶಂಬಿ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧೆ ಮಾಡಿದ್ದ ಸರೋಜ್ ಬಿಜೆಪಿಯ ಹಾಲಿ ಸಂಸದ ವಿನೋದ್ ಕುಮಾರ್ ವಿರುದ್ಧ ಜಯದ ನಗೆ ಬೀರಿದ್ದಾರೆ. 54 ವರ್ಷದ ವಿನೋದ್ ಕುಮಾರ್ ವಿರುದ್ಧ 1 ಲಕ್ಷದ 3 ಸಾವಿರದ 944 ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಸಂಸದರಾಗಿದ್ದಾರೆ. ಸಮಾಜವಾದಿ ಪಕ್ಷದ ನ್ಯಾಷನಲ್ ಜನರಲ್ ಸೆಕ್ರೇಟರಿ, ಐದು ವರ್ಷದ ಎಂಎಲ್‌ಎ ಆಗಿರುವ, ಮಾಜಿ ಸಚಿವರೂ ಆಗಿದ್ದ ಇಂದ್ರಜಿತ್ ಸರೋಜ್ ಅವರ ಪುತ್ರ ಪುಷ್ಪೇಂದ್ರ ಸರೋಜ್. ಬಿಎಸ್‌ಸಿ ಪದವಿ ಮಾಡಿರುವ ಪುಷ್ಪೇಂದ್ರ ಸರೋಜ್ ಲಂಡನ್‌ನಾ ಕ್ವೀನ್ ಮೇರಿ ಯೂನಿವರ್ಸಿಟಿಯಲ್ಲೂ ವಿದ್ಯಾಭ್ಯಾಸ ಮಾಡಿದ್ದಾರೆ. ಈಗ ಚುನಾವಣೆಯಲ್ಲಿ ಗೆದ್ದು ರಾಜಕೀಯ ಪಡಸಾಲೆಗೆ ಅಧಿಕೃತವಾಗಿ ಎಂಟ್ರಿ ಕೊಡ್ತಿದ್ದಾರೆ.
ಪ್ರಿಯಾ ಸರೋಜ್
ಈ ಬಾರಿ ಮೋಡಿ ಮಾಡಿದ ಯುವ ಅಭ್ಯರ್ಥಿಗಳಲ್ಲಿ ಪ್ರಿಯಾ ಸರೋಜ್ ಕೂಡಾ ಒಬ್ಬರು. ಸಮಾಜವಾದಿ ಪಕ್ಷದ ಪ್ರಿಯಾ ಸರೋಜ್ ಉತ್ತರ ಪ್ರದೇಶದ ಮಚ್ಲಿಶಾರ್ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದುಕೊಂಡಿದ್ರು. ಅಲ್ಲಿ ಹಾಲಿ ಸಂಸದರಾಗಿದ್ದ 73 ವರ್ಷದ ಬಿಜೆಪಿ ಹಿರಿಯ ರಾಜಕಾರಣಿ ಬೋಲನಾಥ್‌ಗೆ 25 ವರ್ಷದ ಪ್ರಿಯಾ ಸರೋಜ್ ಶಾಕ್ ಕೊಟ್ಟಿದ್ದಾರೆ. 4,51,292 ಮತ ಪಡೆದಿರುವ ಪ್ರಿಯಾ 35 ಸಾವಿರದ 850 ಮತಗಳಿಂದ ಬಿಜೆಪಿ ಅಭ್ಯರ್ಥಿ ಸೋಲಿಸಿದ್ದಾರೆ. ಪ್ರಿಯಾ ಸರೋಜ್ ತಂದೆ ತೂಫಾನಿ ಸರೋಜ್
ಮೂರು ಬಾರಿ ಸಂಸದರಾಗಿ ಕಾರ್ಯ ನಿರ್ವಹಿಸಿದ್ದಾರೆ. ತಂದೆಯ ರಾಜಕೀಯ ಅನುಭವ ಮಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಶಾಂಭವಿ ಚೌಧರಿ
ಬಿಹಾರದ ಸಮಸ್ತಿಪುರ ಕ್ಷೇತ್ರದಲ್ಲಿ ರಾಮ್ ವಿಲಾಸ್ ಪಾಸ್ವಾನ್ ಪಾರ್ಟಿ ಎಲ್‌ಜೆಪಿಯಿಂದ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿರುವ ಶಾಂಭವಿ ಚೌಧರಿಗೆ ಜಸ್ಟ್ 25 ವರ್ಷ. ಅತ್ಯಂತ ಕಿರಿ ವಯಸ್ಸಿನ ಮಹಿಳೆ ಸಂಸತ್‌ಗೆ ಪ್ರವೇಶ ಮಾಡ್ತಿರೋದು ಇದೇ ಮೊದಲು.
ಕಾಂಗ್ರೆಸ್‌ನಾ ಸನ್ನಿ ಹಜಾರಿ ವಿರುದ್ಧ ಸುಮಾರು 1 ಲಕ್ಷದ 87 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಹಿಂದೆ ಬಿಹಾರದಲ್ಲಿ ನಿತೀಶ್ ಕುಮಾರ್ ಸಂಪುಟದ ಭಾಗವಾಗಿದ್ದ ಅಶೋಕ್ ಚೌಧರಿ ಮಗಳು ಶಾಂಭವಿ ಚೌಧರಿ.
ಸಂಜನಾ ಜತವ್
26 ವರ್ಷದ ಸಂಜನಾ ಜತವ್ ಕೂಡಾ ಕಿರಿಯ ಸಂಸದರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ರಾಜಸ್ಥಾನದ ಈ ಯಂಗ್ ಅಂಡ್ ಎನರ್ಜಿಟಿಕ್ ಲೇಡಿ ಅಭ್ಯರ್ಥಿ ಬಿಜೆಪಿಯ ರಾಮ್‌ಸ್ವರೂಪ್ ಕೋಳಿಗೆ ಸೋಲಿನ ರುಚಿ ತೋರಿಸಿದ್ದಾರೆ. ರಾಜಸ್ಥಾನದ ಬರತ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಸಂಜನಾ 51,983 ಮತಗಳ ಮಾರ್ಜಿನ್‌ನಲ್ಲಿ ಜಯ ಸಾಧಿಸಿದ್ದಾರೆ. 2023 ರಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕತುಮಾರ್ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಂಜನಾ ಜತವ್ ಕೇವಲ 409 ಮತಗಳಿಂದ ಸೋಲುಂಡಿದ್ರು. ಈಗ ಲೋಕಸಭೆಯಲ್ಲಿ ಸ್ಪರ್ಧಿಸಿ ಭರ್ಜರಿ ಜಯದ ಮೂಲಕ ಯುವ ಸಂಸದರಾಗಿದ್ದಾರೆ
ಕರ್ನಾಟಕದಲ್ಲಿ ಈ ಬಾರಿ ಹೆಚ್ಚು ಕುತೂಹಲ ಮೂಡಿಸಿದ್ದು ಯುವ ಅಭ್ಯರ್ಥಿಗಳು ಪ್ರಿಯಾಂಕಾ ಜಾರಕಿಹೊಳಿ, ಸಂಯುಕ್ತಾ ಪಾಟೀಲ್, ಹಾಗೂ ಸಾಗರ್ ಖಂಡ್ರೆ. ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿಯಿಂದ ಸ್ಪರ್ಧಿಸಿ ಗೆಲುವಿನ ಕೇಕೆ ಹಾಕಿದ್ದಾರೆ. ಮತ್ತೊಬ್ಬ ಮಿನಿಸ್ಟರ್ ಈಶ್ವರ್ ಖಂಡ್ರೆ ಪುತ್ರ ಯುವ ನಾಯಕ ಸಾಗರ್ ಖಂಡ್ರೆ ಬಿಜೆಪಿಯ ಹಿರಿಯ ನಾಯಕ ಭಗವಂತ ಖೂಬಾಗೆ ಶಾಕ್ ಕೊಟ್ಟು ವಿಜಯಪತಾಕೆ ಹಾರಿಸಿದ್ದಾರೆ.
ಪ್ರಿಯಾಂಕಾ ಜಾರಕಿಹೊಳಿ
ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿದ ಪ್ರಿಯಾಂಕಾ ಜಾರಕಿಹೊಳಿ ಬಿಜೆಪಿಯ ಹಾಲಿ ಎಂಪಿಗೆ ಶಾಕ್ ಕೊಟ್ಟಿದ್ದಾರೆ. 7,13,461 ಮತಗಳನ್ನು ಪಡೆದಿರುವ ಪ್ರಿಯಾಂಕಾ 90,834 ಮತಗಳ ಅಂತರದಿಂದ ಅಣ್ಣಾ ಸಾಹೇಬ್ ಜೊಲ್ಲೆಗೆ ಸೋಲುಣಿಸಿದ್ದಾರೆ.
ಮೀಸಲು ಕ್ಷೇತ್ರವಲ್ಲದ ಚಿಕ್ಕೋಡಿಯಲ್ಲಿ ಸ್ಪರ್ಧಿಸಿದ್ದ ಪ್ರಿಯಾಂಕಾ ತಮ್ಮ ಗೆಲುವಿನ ಮೂಲಕ ಸಂಸದರಾಗಿ ಆಯ್ಕೆಯಾದ ಕರ್ನಾಟಕದ ಯಂಗೆಸ್ಟ್ ಟ್ರೈಬಲ್ ವುಮನ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಬಿಜೆಪಿ ಮುಂಬೈ ಕರ್ನಾಟಕದಲ್ಲಿ ಉತ್ತಮ ಸಾಧನೆ ತೋರಿದ್ರೂ ಕೂಡಾ ಒಂದು ಕ್ಷೇತ್ರದಲ್ಲಿ ಮಾತ್ರ ಸೋತಿದೆ. ಅದು ಪ್ರಿಯಾಂಕಾ ಸ್ಪರ್ಧಿಸಿದ್ದ ಚಿಕ್ಕೋಡಿ ಕ್ಷೇತ್ರ ಮಾತ್ರ. ಆ ಮಟ್ಟಿಗೆ ಬಿಜೆಪಿಗೆ ಠಕ್ಕರ್ ಕೊಟ್ಟು ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ ಯುವನಾಯಕಿ ಪ್ರಿಯಾಂಕಾ. ಸದ್ಯ ಪ್ರಿಯಾಂಕಾಗೆ ಫಲಿತಾಂಶ ಪ್ರಕಟವಾದ ಜೂನ್ 4ಕ್ಕೆ 27 ವರ್ಷ, 1 ತಿಂಗಳು 18 ದಿನಗಳಾಗಿದೆ.
ಸಾಗರ್ ಖಂಡ್ರೆ
ಮುಖದ ಮೇಲೆ ಮೀಸೆ ಮೂಡದ ಈ ಹುಡುಗ ಲೋಕಸಭೆಯಲ್ಲಿ ಸೋತು ಸುಣ್ಣವಾಗ್ತಾನೆ ಎಂದು ಸಾಗರ್ ಖಂಡ್ರೆ ಬಗ್ಗೆ ಟೀಕೆ ಮಾಡಿದವರೇ ಹೆಚ್ಚು. ಈ ಟೀಕೆಗಳಿಗೆ ಗೆಲುವಿನ ಮೂಲಕ ಉತ್ತರ ಕೊಟ್ಟಿದ್ದಾರೆ ಯಂಗ್ ಬ್ಲಡ್ ಸಾಗರ್ ಖಂಡ್ರೆ. ಬೀದರ್ ಕ್ಷೇತ್ರದಲ್ಲಿ ಸಾಗರ್‌ಗೆ ಎದುರಾಳಿ ಹಾಲಿ ಸಂಸದರೂ, ಸತತವಾಗಿ ಗೆಲುವನ್ನ ನೋಡುತ್ತಾ ಬಂದಿದ್ದ ಭಗವಂತ ಖೂಬಾ. ಅಂಥ ಅನುಭವಿ ರಾಜಕಾರಣಿಗೆ ಈ ಯುವ ನಾಯಕ ಶಾಕ್ ಕೊಟ್ಟಿದ್ದಾರೆ. 26 ವರ್ಷದ ಸಾಗರ್ ಖಂಡ್ರೆ ನೂತನ ಸಂಸದರಾಗಿ ಸಂಸತ್‌ಗೆ ಪ್ರವೇಶ ಮಾಡ್ತಿದ್ದಾರೆ.
ಇಂದಿನ ಯುವ ಜನಾಂಗವೇ ದೇಶದ ಮುಂದಿನ ಭವಿಷ್ಯ. ದೇಶದ ಆಶಯ ಅಭಿವೃದ್ಧಿಗೆ ಯುವಜನಾಂಗವೇ ತಳಹದಿ ಆಗಬೇಕು. ಆ ನಿಟ್ಟಿನಲ್ಲಿ ಇನ್ನೂ ಹೆಚ್ಚು ಹೆಚ್ಚು ಯುವ ಸಂಸದರೂ ಆಯ್ಕೆಯಾಗಿ ದೇಶದ ಆಡಳಿತದ ಭಾಗವಾಗಬೇಕಿದೆ.